ರಾಜಕೀಯ

2023ರ ವಿಧಾನಸಭಾ ಚುನಾವಣೆಯ ಬಿಜೆಪಿ ಸುನಾಮಿಯಲ್ಲಿ ಕಾಂಗ್ರೆಸ್ ಕಣ್ಮರೆಯಾಗಲಿದೆ: ಸಿಎಂ ಬೊಮ್ಮಾಯಿ

Manjula VN

ಬೆಂಗಳೂರು: ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದು, 2023ರಲ್ಲಿ ಕರ್ನಾಟಕದಲ್ಲಿಯೂ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ವಿಶ್ವಾಸ ವ್ಯಕ್ತಪಡಿಸಿದರು.

ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಬಿಜೆಪಿಯ ಜನಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಇತ್ತೀಚೆಗೆ ಎಸ್‌ಸಿ/ಎಸ್‌ಟಿ ಕೋಟಾ ಹೆಚ್ಚಳ ಸೇರಿದಂತೆ ನಮ್ಮ ಸರ್ಕಾರದ ನೀತಿಗಳಿಂದಾಗಿ ಕರ್ನಾಟಕದಲ್ಲಿ ಬಿಜೆಪಿ ಪರ ಅಲೆ ಇದೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸುನಾಮಿಯಲ್ಲಿ ಕಾಂಗ್ರೆಸ್ ಕಣ್ಮರೆಯಾಗಲಿದೆ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬೊಮ್ಮಾಯಿಸ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿತ್ತು. ಅರ್ಕಾವತಿ ಡಿನೋಟಿಫಿಕೇಶನ್, ಸರ್ಕಾರಿ ಹಾಸ್ಟೆಲ್‌ಗಳಿಗೆ ದಿಂಬು ಮತ್ತು ಹಾಸಿಗೆ ಖರೀದಿಯಲ್ಲಿ, ಎಸ್‌ಸಿ/ಎಸ್‌ಟಿಗಳಿಗೆ ಬೋರ್‌ವೆಲ್ ಕೊರೆಯುವಲ್ಲಿ ಭ್ರಷ್ಟಾಚಾರ ನಡೆದಿದೆ. “ಸಿದ್ದರಾಮಯ್ಯ ಅವರು ಲೋಕಾಯುಕ್ತವನ್ನು ದುರ್ಬಲಗೊಳಿಸಿದರು. ತಮ್ಮ ಮತ್ತು ಇತರ 50 ಜನರ ವಿರುದ್ಧದ ಪ್ರಕರಣಗಳನ್ನು ಮುಚ್ಚಿಹಾಕಲು ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಿದರು. ಆದರೆ ಮುಂದಿನ ದಿನಗಳಲ್ಲಿ ಬಿ ರಿಪೋರ್ಟ್ ಸಲ್ಲಿಸಿರುವ ಪ್ರಕರಣಗಳನ್ನು ಮತ್ತೆ ತೆರೆಯುತ್ತೇವೆ ಎಂದು ತಿಳಿಸಿದರು.

ರಾಜ್ಯದ ಅಭಿವೃದ್ದಿ ಕುಂಠಿತವಾಗಿತ್ತು. ಸಿದ್ದರಾಮಯ್ಯ ಆಡಳಿತ ಮಾಡುವಾಗ ಕೋವಿಡ್ ಇರಲಿಲ್ಲ. ಹಣಕಾಸಿನ ಸ್ಥಿತಿ ಗಂಭೀರವಾಗಿತ್ತು. ಆದರೆ 2 ಲಕ್ಷ ಕೋಟಿ ಸಾಲವನ್ನು ಕರ್ನಾಟಕದ ಜನತೆಯ ಮೇಲೆ ಹೇರಿದರು. ಇಷ್ಟು ಸಾಲ ತಂದು ರಾಜ್ಯದ ಅಭಿವೃದ್ಧಿಯಾಗಬೇಕಾಗಿತ್ತು. ಬಿಜೆಪಿ 5 ವರ್ಷಗಳಲ್ಲಿ ಸುಮಾರು 32 ಸಾವಿರ ಕೋಟಿ ಖರ್ಚು ಮಾಡಿ 7 ಲಕ್ಷ ನೀರಾವರಿ ವ್ಯವಸ್ಥೆ ಕಲ್ಪಿಸಿದೆ. ಕಾಂಗ್ರೆಸ್ ಪಕ್ಷ 5 ವರ್ಷಗಳಲ್ಲಿ 54 ಸಾವಿರ ಕೋಟಿ ಖರ್ಚು ಮಾಡಿ ಕೇವಲ 2 ಲಕ್ಷ ಎಕರೆಗೆ ನೀರಾವರಿ ಕಲ್ಪಿಸಿದೆ. ಎಲ್ಲಿ ಹೋಯಿತು ಈ ದುಡ್ಡು. ಯಾರ ಕಿಸೆಗೆ ಹೋಯ್ತು ಈ ದುಡ್ಡು ಎಂದು ಪ್ರಶ್ನಿಸಿದರು.

ಇದೇ ವೇಳೆ ಎಸ್‌ಸಿ/ಎಸ್‌ಟಿ ಕೋಟಾ ಹೆಚ್ಚಳ ಮಾಡಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಏಕೆ ಧೈರ್ಯ ಮಾಡಲಿಲ್ಲ ಪ್ರಶ್ನಿಸಿದರು.

"ಹಿಂದಿನ ಯಾವುದೇ ಸರ್ಕಾರಗಳು ಮೀಸಲಾತಿ ಹೆಚ್ಚಿಸುವ ಧೈರ್ಯವನ್ನು ಮಾಡಲಿಲ್ಲ... ಆದರೆ ಅದನ್ನು ನಾವು ಮಾಡಿದ್ದೇವೆ ... ನೀವೆಲ್ಲರೂ ನನ್ನನ್ನು ಬೆಂಬಲಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ಬಳಿಕ ಬಿಜೆಪಿ ಮತ್ತು ಆರೆಸ್ಸೆಸ್ ಜೈ ಸಿಯಾರಾಮ್ ಘೋಷಣೆಯನ್ನು ನಿರ್ಲಕ್ಷಿಸುತ್ತಿವೆ ಎಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ಬೊಮ್ಮಾಯಿ ಅವರು, "ರಾಮ ಪದದಲ್ಲಿ ಸೀತೆ, ಲಕ್ಷ್ಮಣ ಮತ್ತು ಹನುಮಂತನನ್ನು ಅಳವಡಿಸಲಾಗಿದೆ ಎಂಬ ಸರಳ ತಿಳುವಳಿಕೆ ರಾಹುಲ್‌ಗೆ ಇಲ್ಲ" ಎಂದರು.

"ಆಯ್ಕೆ ನಿಮ್ಮದು (ಮತದಾರರು)... ನೀವು ಕಾಂಗ್ರೆಸ್‌ನ ಸೋನಿಯಾ ಮಾತಾ ಕೀ ಜೈ ಅಥವಾ ಬಿಜೆಪಿಯ ಭಾರತ್ ಮಾತಾ ಕಿ ಜೈ" ಎಂದು ಹೇಳಬೇಕೆ ಎಂದು ನೀವು ನಿರ್ಧರಿಸಬೇಕು ಎಂದು ಹೇಳಿದರು.

ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಿಗೆ ಕಾಂಗ್ರೆಸ್‌ನಲ್ಲಿಯೇ ಶತ್ರುಗಳಿದ್ದು, ಅವರನ್ನು ಸೋಲಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ ಎಂದರು.

ಇದೇ ವೇಳೆ ಬೊಮ್ಮಾಯಿ ಅವರು ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮುಂದಾಗಿರುವ ಮಾಜಿ ಸಂಸದ ಮುದ್ದಹನುಮೇಗೌಡ ಮತ್ತು ಕೃಷ್ಣಕುಮಾರ್ ಇಬ್ಬರಿಗೂ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಇದರಂತೆ 2023ರ ಚುನಾವಣೆಯಲ್ಲಿ ಕೃಷ್ಣಕುಮಾರ್ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಿಂದ ಮುದ್ದಹನುಮೇಗೌಡ ಅವರನ್ನು ಕಣಕ್ಕಿಳಿಸುವ ಸುಳಿವು ನೀಡಿದರು.

ಯಾತ್ರೆಯಲ್ಲಿ ಬಿಎಸ್‌ವೈ ಗೈರು
ಬುಧವಾರ ನಡೆದ ಯಾತ್ರೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಗೈರು ಹಾಜರಾಗಿದ್ದು ಎದ್ದು ಕಾಣುತ್ತಿತ್ತು.

ಪೂರ್ವ ನಿಗದಿತ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಕಾರ್ಯಕ್ರಮದಲ್ಲಿ ಬೊಮ್ಮಾಯಿಯವರು ಸ್ಪಷ್ಟಪಡಿಸಿದರು.

SCROLL FOR NEXT