ರಾಜಕೀಯ

ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಜನರ ಆಶೀರ್ವಾದದಿಂದ ನಾನೇ ಮುಂದಿನ ಮುಖ್ಯಮಂತ್ರಿಯಾಗುತ್ತೇನೆ: ಹೆಚ್ ಡಿ ಕುಮಾರಸ್ವಾಮಿ

Sumana Upadhyaya

ರಾಮನಗರ: ಕಾಂಗ್ರೆಸ್ ನಲ್ಲಿ ಸಿಎಂ ಖುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವೆ ಆಂತರಿಕ ಬಡಿದಾಟ ನಡೆಯುತ್ತಿರುವಾಗಲೇ ಇತ್ತ ಜೆಡಿಎಸ್ ನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ. 

ನಿನ್ನೆ ರಾಮನಗರದಲ್ಲಿ ಚಾಮುಂಡೇಶ್ವರಿ ಕರಗ ಮಹೋತ್ಸವದ ಸಾಂಸ್ಕೃತಿಕ ‌ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾಡಿನಲ್ಲಿ ಬಹಳ ಜನ ಸಿಎಂ ಆಗಬೇಕೆಂದು ಆಸೆ ಪಟ್ಟಿದ್ದಾರೆ. ಆದರೆ ಭಗವಂತನ ಇಚ್ಛೆ ಬೇರೆ ಇದೆ, ತಾಯಿ ಚಾಮುಂಡೇಶ್ವರಿ ಇಚ್ಛೆ ಬೇರೆ ಇದೆ. ಚಾಮುಂಡೇಶ್ವರಿ ಮತ್ತು ಜನರ ಆಶಿರ್ವಾದದಿಂದ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ, ನಿಮ್ಮ ಆಶೀರ್ವಾದದಿಂದ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಬರುತ್ತೇನೆ ಎಂದು ಘಂಟಾಘೋಷವಾಗಿ ಹೇಳಿದರು.

ಕಳೆದ ಮೂರು ವರ್ಷಗಳಿಂದ ಕೋವಿಡ್​ನಿಂದ ಕರಗ ಮಾಡಲು ಸಾಧ್ಯವಾಗಿರಲಿಲ್ಲ. ನನಗೆ ರಾಜಕೀಯ ಜನ್ಮ ಕೊಟ್ಟಿರುವ ನಿಮ್ಮ ಜೊತೆ ಮನಸ್ಸಿನಲ್ಲಿ ಇರುವ ಭಾವನೆ ಹಂಚಿಕೊಳ್ಳಲು ಈ ಕಾರ್ಯಕ್ರಮ. ರೈತರು ನೆಮ್ಮದಿಯಿಂದ ಬದಕಲು ಚಾಮುಂಡೇಶ್ವರಿ ತಾಯಿ ಕರುಣಿಸಲಿ. 2019ರ ಜುಲೈ ತಿಂಗಳಲ್ಲಿ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕುತಂತ್ರದಿಂದ ತೆಗೆಯಲಾಗಿತ್ತು. ತಾಯಿ ಚಾಮುಂಡೇಶ್ವರಿ ಆಶಿರ್ವಾದ ಪಡೆದು, ನಿಮ್ಮ ಸಮ್ಮುಖದಲ್ಲಿ ಪ್ರತಿಜ್ಞೆ ಮಾಡಿ ಹೊರಟಿದ್ದೇನೆ ಎಂದು ಹೇಳಿದರು.

ರಾಮನಗರ ನನ್ನ ಕರ್ಮಭೂಮಿ, ಇಲ್ಲೇ ಮಣ್ಣಾಗಿ ಹೋಗುವುದು: ನಮ್ಮ ಬದುಕು ಇರುವುದು ಹಳ್ಳಿಯಲ್ಲಿ. ಕಳೆದ ರಾಜಕೀಯ ಸನ್ನಿವೇಶದಲ್ಲಿ ಎರಡು ಕಡೆ ಕಾರ್ಯಕರ್ತರ ಒತ್ತಡದಿಂದ ಚುನಾವಣೆಗೆ ಸ್ವರ್ಧೆ ಮಾಡಿದ್ದೆ. ಸಸಿಯಾಗಿ ನೆಟ್ಟು, ರಾಜ್ಯದಲ್ಲಿ ಹೆಮ್ಮಾರವಾಗಿ ಬೆಳೆಸಿದ್ದೀರಿ. ನಾನು ಮಣ್ಣಲಿ ಮಣ್ಣಾಗುವುದು ಇದೇ ರಾಮನಗರ ಮಣ್ಣಿನಲ್ಲಿ. ನೀವು ಕೊಟ್ಟ ಶಕ್ತಿಯನ್ನು ಲಕ್ಷಾಂತರ ಜನರಿಗೆ ಧಾರೆ ಎರೆದಿದ್ದೇನೆ. ನನ್ನ ರಾಮನಗರ ತಾಲೂಕಿನ ಸಂಬಂಧ ತಾಯಿ ಮಗನ ಸಂಬಂಧ. ಚನ್ನಪಟ್ಟಣ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟರೆ ಮತ್ತೆ ಅಲ್ಲಿ ಗೆಲ್ಲಲು ಕಷ್ಟ ಎಂದು ಅಲ್ಲ. ನಾವು ಎಂದು ಜನರಿಗೆ ತೊಂದರೆ ಕೊಟ್ಟಿಲ್ಲ. ನನ್ನ ಜೀವನದ ಸವಾಲು ಪಂಚರತ್ನ‌ ಯೋಜನೆ. ನಾನು ಬದುಕಿರುವ ಒಂದೊಂದು ಕ್ಷಣ ಬಡವರಿಗಾಗಿ. ನೀವು ಕೊಟ್ಟಿರುವ ಶಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ನಾನು ಇಲ್ಲಿಯೇ ಮಣ್ಣಾಗಿ ಹೋಗುವುದು ಎಂದಿದ್ದಾರೆ. 

ಕುಮಾರಸ್ವಾಮಿ ಸಿಎಂ ಆಗೋದು ಖಚಿತ ಸಿ ಎಂ ಇಬ್ರಾಹಿಂ: ಇನ್ನು ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, 2023ರಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವುದು ಖಚಿತ, ಅದಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು. ಅವರಿಗೆ ತಾಯಿ ಚಾಮುಂಡೇಶ್ವರಿಯ ಕೃಪೆಯಿದೆ. ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ, ಮುಂದಿನ ಚಾಮುಂಡೇಶ್ವರಿ ಕರಗಕ್ಕೆ ಸಿಎಂ ಆಗಿ ಕುಮಾರಸ್ವಾಮಿ ಬಂದು ಉತ್ಸವ ಮಾಡುತ್ತಾರೆ,  ಸಾಬ್ರು ಹೇಳಿದ ಮಾತು ಯಾವತ್ತು ಸುಳ್ಳಾಗೋದಿಲ್ಲ ಎಂದರು.

SCROLL FOR NEXT