ರಾಜಕೀಯ

ಟಿಪ್ಪು ಸುಲ್ತಾನ್ ಎಂದರೆ ಸಾಕು ಸಿದ್ದರಾಮಯ್ಯ ಮೈಮೇಲೆ ಬಂದಂಗೆ ಆಡ್ತಾರೆ: ಅಶೋಕ್ ಹೇಳಿಕೆಗೆ ಸಿದ್ದು ಪ್ರತಿಕ್ರಿಯೆ

Shilpa D

ಬೆಂಗಳೂರು: ಟಿಪ್ಪು ಸುಲ್ತಾನ್ ಎಂದ ಕೂಡಲೇ ಉರಿದುಬೀಳುವ ಆರ್.ಅಶೋಕ್ ಅವರೂ ಸೇರಿದಂತೆ ರಾಜ್ಯ ಬಿಜೆಪಿಯ ನಾಯಕರು, ಮೊದಲು ಅವರ ಸರ್ಕಾರವೇ ಟಿಪ್ಪು ಬಗ್ಗೆ ಬರೆಸಿ, ಪ್ರಕಟಿಸಿದ್ದ ಪುಸ್ತಕ ಮತ್ತು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಗೋವಿಂದ ಕಾರಜೋಳ ಅವರು ಟಿಪ್ಪುವನ್ನು ಹಾಡಿ ಹೊಗಳಿದ ಮುನ್ನುಡಿಯನ್ನು ಓದಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಟಿಪ್ಪುವಿನ ರಾಷ್ಟ್ರೀಯ ರಾಜ್ಯದ ಕಲ್ಪನೆ, ಸಮರ ಕಲೆ, ಸುಧಾರಣೆಯ ಹುರುಪು, ಟಿಪ್ಪುವನ್ನು ಎಣೆಯಿಲ್ಲದ ನಾಯಕನನ್ನಾಗಿ ಮಾಡಿದೆ’’ ಎಂದು ತಾವೇ ಪ್ರಕಟಿಸಿದ್ದ ಪುಸ್ತಕದಲ್ಲಿ ಹೊಗಳಿದವರು ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಸಚಿವ ಗೋವಿಂದ ಕಾರಜೋಳ. ಆಗ ತಾವೆಲ್ಲಿ ಅಡಗಿ ಕೂತಿದ್ದೀರಿ ಆರ್. ಅಶೋಕ್? ಎಂದು ಪ್ರಶ್ನಿಸಿದ್ದಾರೆ.

ಟಿಪ್ಪು ಸುಲ್ತಾನ್ ವಿಚಾರ ಪ್ರಸ್ತಾಪಿಸಿದ್ದ ಸಚಿವ ಆರ್.ಅಶೋಕ್ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಟಿಪ್ಪು ಸುಲ್ತಾನ್ ಎಂದಾಗ ಮೊದಲು ಮೈಮೇಲೆ ಬಂದದ್ದು ರಾಜ್ಯ ಬಿಜೆಪಿ ನಾಯಕರಿಗೆ. ಹತ್ತು ವರ್ಷಗಳ ಹಿಂದೆ ಈ ರೀತಿ ಮೈಮೇಲೆ ಬಂದಾಗಲೇ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಡಾ.ಶೇಖ್ ಅಲಿ ಅವರಿಂದ 425 ಪುಟಗಳ ಪುಸ್ತಕ ಬರೆಸಿ ಸರ್ಕಾರದಿಂದಲೇ ಪ್ರಕಟಿಸಿದ್ದು ಎಂದು ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಟಿಪ್ಪು ಕಂಡ್ರೆ ಸಿದ್ದರಾಮಯ್ಯ ಅವರಿಗೆ ಅದೇನೋ ಪ್ರೀತಿ. ಟಿಪ್ಪು ಅಂದ್ರೆ ಸಾಕು ಸಿದ್ದರಾಮಯ್ಯಗೆ ಮೈಮೇಲೆ ಬಂದಾಂಗೆ ಆಡ್ತಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಕ್ರೈಸ್ತ, ಮುಸ್ಲಿಂ ಆರಾಧನಾ ಸ್ಥಳಗಳನ್ನ ಉಳಿಸಿಕೊಂಡು, ದೇವಾಲಯದ ಚಿತ್ರಗಳನ್ನ ಕೈ ಬಿಟ್ಟಿದ್ದರು. ಹಿಂದೂಗಳ ಕಡೆಗಣನೆ ಮಾಡಿ ಮುಸಲ್ಮಾನರ ಓಲೈಕೆ ಮಾಡಲಾಗಿತ್ತು. ಸಿದ್ದರಾಮಯ್ಯ ಅವಧಿಯಲ್ಲಿ ಶಿವಾಜಿಯನ್ನ ಕಡೆಗಣಿಸಲಾಗಿತ್ತು. ರಜಪೂತರ ಗುಣ ಧರ್ಮಗಳನ್ನ ಕಡೆಗಣಿಸಿದ್ರು ಎಂದು ಆರ್​. ಅಶೋಕ್​ ಹೇಳಿದ್ದರು. ಅಶೋಕ್ ಹೇಳಿಕೆಗೆ ಸಿದ್ದರಾಮಯ್ಯ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

SCROLL FOR NEXT