ರಾಜಕೀಯ

ನಾನು ಮತ್ತೆ ಸಿಎಂ ಆದರೆ ಒಬಿಸಿ ಪಟ್ಟಿಗೆ ಕುಂಚಿಟಿಗ ಒಕ್ಕಲಿಗರ ಸೇರ್ಪಡೆ: ಹೆಚ್.ಡಿ.ಕುಮಾರಸ್ವಾಮಿ

Manjula VN

ತುಮಕೂರು: ರಾಜ್ಯದ ಮುಖ್ಯಮಂತ್ರಿಯಾದರೆ ಕುಂಚಟಿಗ ಒಕ್ಕಲಿಗ ಸಮುದಾಯದವರಿಗೆ ಒಬಿಸಿ ಸ್ಥಾನಮಾನ ನೀಡುವುದಾಗಿ ಜೆಡಿಎಸ್‌ನ ಹಿರಿಯ ಮುಖಂಡ ಎಚ್‌ಡಿ ಕುಮಾರಸ್ವಾಮಿ ಅವರು ಶನಿವಾರ ಹೇಳಿದ್ದಾರೆ. 

ತುಮಕೂರಿನಲ್ಲಿ ನಡೆದ ಕುಂಚಟಿಗ ಒಕ್ಕಲಿಗ ಸಮುದಾಯದ ಸಮಾವೇಶದಲ್ಲಿ ಮಾತನಾಡಿದ ಅವರು. “ಕೇಂದ್ರ ಸರ್ಕಾರವು ಪ್ರಸ್ತಾವನೆಯನ್ನು ಅನುಮೋದಿಸಿಲ್ಲ. ಆದರೆ ಇತ್ತೀಚಿನ ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ, ರಾಜ್ಯಗಳು ಈ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಬಹುದು. ನಾನು ಸಿಎಂ ಆಗುತ್ತೇನೋ ಇಲ್ಲವೋ ಗೊತ್ತಿಲ್ಲ... ಆದರೆ ಧಾರ್ಮಿಕ ಮುಖಂಡರ ಆಶೀರ್ವಾದದಿಂದ ಆಗುತ್ತೇನೆಂದು ಹೇಳಿದ್ದಾರೆ. 

ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮಿ ಮಾತನಾಡಿ, ಸಮ್ಮಿಶ್ರ ಆಡಳಿತದಲ್ಲಿ ಕುಮಾರಸ್ವಾಮಿ ಇನ್ನೂ 6 ತಿಂಗಳು ಸಿಎಂ ಆಗಿ ಮುಂದುವರಿದಿದ್ದರೆ ಸಮಾಜ ಧ್ಯೇಯ ಸಾಧಿಸುತ್ತಿತ್ತು. ವಿಧಾನಸೌಧದ ಒಳಗೂ ಹೊರಗೂ ಹೋರಾಟ ಮಾಡಿ ಒಬಿಸಿ ಮೀಸಲಾತಿ ಪಡೆಯಬೇಕು. ಕುಂಚಟಿಗರು ತಮ್ಮ ಸಮುದಾಯದ ಹೆಸರನ್ನು ಒಕ್ಕಲಿಗರು ಎಂದು ದಾಖಲಿಸಬೇಕು’ ಎಂದು ಸಲಹೆ ನೀಡಿದರು.

ಕುಂಚಟಿಗ ಒಕ್ಕಲಿಗ ಸಮುದಾಯದ ಧಾರ್ಮಿಕ ಮುಖ್ಯಸ್ಥ ಶ್ರೀ ನಂಜಾವಧೂತ ಅವರು ಮಾತನಾಡಿ, ಸಮುದಾಯದ ಬಾಂಧವರು ತಮ್ಮ ಶಾಲಾ ದಾಖಲಾತಿಗಳಲ್ಲಿ ಹಿಂದೂ ಕುಂಚಟಿಗರ ಬದಲಿಗೆ ಒಕ್ಕಲಿಗರೆಂದು ದಾಖಲಾಗಬೇಕು. ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ಎ ನಾರಾಯಣಸ್ವಾಮಿ ಅವರು ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಸಮುದಾಯವನ್ನು ಒಬಿಸಿ ಪಟ್ಟಿಗೆ ಇನ್ನು ಸೇರಿಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. 

ಈ ನಡುವೆ ನಾರಾಯಣಸ್ವಾಮಿ ಹಾಗೂ ಬಿಜೆಪಿ ಸಂಸದ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.

ಸಮಾವೇಶದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಸಕರಾದ ಡಾ.ಸಿ.ಎಂ.ರಾಜೇಶ್ ಗೌಡ, ಎಂ.ವಿ.ವೀರಭದ್ರಯ್ಯ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಮತ್ತಿತರರು ಉಪಸ್ಥಿತರಿದ್ದರು.

SCROLL FOR NEXT