ರಾಜಕೀಯ

ಪಕ್ಷ ವಿರೋಧಿ ಚಟುವಟಿಕೆ: ಎಂ ಆರ್ ಸೀತಾರಾಮ್ ವಿರುದ್ಧ ಶಿಸ್ತು ಕ್ರಮ ಮುಂದೂಡಿದ ರೆಹಮಾನ್ ಖಾನ್

Shilpa D

ಬೆಂಗಳೂರು: ವಿಧಾನಪರಿಷತ್‌ ಟಿಕೆಟ್‌ ತಪ್ಪಿದ ಬಗ್ಗೆ ಆಪ್ತರ ಸಭೆ ನಡೆಸಿ ಬಹಿರಂಗವಾಗಿ ರಾಜ್ಯ ಕಾಂಗ್ರೆಸ್‌ ನಾಯಕತ್ವ ವಿರುದ್ಧ ಅಸಮಾಧಾನ ಹೊರ ಹಾಕಿದ ಮಾಜಿ ಸಚಿವ ಎಂ.ಆರ್‌.ಸೀತಾರಾಂ ಅವರಿಗೆ ನೋಟಿಸ್‌ ನೀಡುವ ನಿರ್ಧಾರವನ್ನು ಮುಂದೂಡಲಾಗಿದೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರೂ ದೆಹಲಿಯಲ್ಲಿರುವ ಹಿನ್ನೆಲೆಯಲ್ಲಿ ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಅವರು ಎಂ.ಆರ್.ಸೀತಾರಾಮ್ ಅವರಿಗೆ ನೋಟಿಸ್ ಜಾರಿ ಮಾಡುವ ನಿರ್ಧಾರವನ್ನು ಮುಂದೂಡಿದ್ದಾರೆ.

ಜುಲೈ 1 ರಂದು ಜಾರಿ ನಿರ್ದೇಶನಾಲಯದ ಸಮನ್ಸ್‌ಗೆ ಹಾಜರಾದ ನಂತರವೇ ಶಿವಕುಮಾರ್ ಬೆಂಗಳೂರಿಗೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ಅಧ್ಯಕ್ಷರು ರಾಜ್ಯದಿಂದ ಹೊರಗಿರುವುದರಿಂದ, ಅವರ ಅನುಪಸ್ಥಿತಿಯಲ್ಲಿ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಖಾನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಗುರುವಾರ  ದೆಹಲಿಯಿಂದ ಹಿಂದಿರುಗಲಿರುವ ಸಿದ್ದರಾಮಯ್ಯ, ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಆತುರದಿಂದ ನಿರ್ಧಾರ ಕೈಗೊಳ್ಳದಂತೆ ಮನವೊಲಿಸಲು ಸೀತಾರಾಮ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT