ರಾಜಕೀಯ

ವಿಧಾನಸಭೆ ಚುನಾವಣೆ: ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ ಕಾಂಗ್ರೆಸ್, ವಲಸೆ ಹೋದವರಿಗೂ ಮುಕ್ತ ಆಹ್ವಾನ

Lingaraj Badiger

ಬೆಂಗಳೂರು: ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆಗೆ ಚುನಾವಣೆ ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆ ನಡೆಸಿದ್ದು, ಟಿಕೆಟ್ ಆಕಾಂಕ್ಷಿಗಳು ತಮ್ಮ ನಾಯಕರ ಮೂಲಕ ಲಾಬಿ ನಡೆಸಿದ್ದಾರೆ.

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳಿಂದ ಕಾಂಗ್ರೆಸ್ ಅರ್ಜಿ ಆಹ್ವಾನಿಸಿದ್ದು, 5 ಸಾವಿರ ರೂಪಾಯಿ ನೀಡಿ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಪಡೆಯಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಅರ್ಜಿ ಜೊತೆಯಲ್ಲಿ ಎರಡು ಲಕ್ಷ ರೂ. ಡಿಡಿ ಶುಲ್ಕ ನೀಡಬೇಕು. ಎಸ್​ಸಿ, ಎಸ್​ಟಿ ಅಭ್ಯರ್ಥಿಗಳು 1 ಲಕ್ಷ ರೂ. ಡಿಡಿ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಬಯಸುವವರು ನವೆಂಬರ್ 5ರಿಂದ  ನವೆಂಬರ್ 15ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಯಾರು ಕಾಂಗ್ರೆಸ್​ ಟಿಕೆಟ್​ ಬಯಸುತ್ತಾರೋ ಅವರು ಅರ್ಜಿ ಹಾಕಬಹುದು. ನಾನು ಸ್ಪರ್ಧಿಸಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಹಾಕಬೇಕು. ಕಾಂಗ್ರೆಸ್​ ಟಿಕೆಟ್​​ಗೆ ಯಾರು ಬೇಕಾದರೂ ಅರ್ಜಿ ಹಾಕಬಹುದು. ಪಕ್ಷದಿಂದ ವಲಸೆ ಹೋದವರಿಗೂ ಮುಕ್ತ ಆಹ್ವಾನ ಎಂದು ಹೇಳುವ ಮೂಲಕ ಈಗಾಗಲೇ ಕಾಂಗ್ರೆಸ್ ಬಿಟ್ಟು ಬೇರೆ-ಬೇರೆ ಪಕ್ಷಗಳಿಗೆ ಹೋಗಿರುವ ನಾಯಕರಿಗೂ ವಾಪಸ್ ಪಕ್ಷಕ್ಕೆ ಬರುವಂತೆ ಪರೋಕ್ಷವಾಗಿ ಆಹ್ವಾನ ನೀಡಿದ್ದಾರೆ.

ಮೊದಲ ಬಾರಿಗೆ ನೂತನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ಬರುತ್ತಿದ್ದಾರೆ. ರಾಜ್ಯಕ್ಕೆ ಭೇಟಿ ಕೊಟ್ಟು ಬಳಿಕ ಉಳಿದ ರಾಜ್ಯಗಳಿಗೆ ಹೋಗಲಿದ್ದಾರೆ. ನವೆಂಬರ್ 6ರಂದು ಬೆಳಗ್ಗೆ 10.50ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದು, ಸಾವಿರಾರು ಕಾರ್ಯಕರ್ತರು ಹಾಗೂ ಮುಖಂಡರು ವಿಮಾನ ನಿಲ್ದಾಣದಲ್ಲಿ ಖರ್ಗೆ ಅವರನ್ನು ಸ್ವಾಗತಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

SCROLL FOR NEXT