ರಾಜಕೀಯ

ಇಂದಿನಿಂದ ಬಿಜೆಪಿ 'ಜನ ಸಂಕಲ್ಪ ಯಾತ್ರೆ' ಪುನರಾರಂಭ; ನವೆಂಬರ್ 9 ರಂದು ಬೆಳಗಾವಿಯಲ್ಲಿ ಸಿಎಂ ನೇತೃತ್ವದಲ್ಲಿ ಸಭೆ

Manjula VN

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ರಾಜ್ಯ ಬಿಜೆಪಿ,. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ಸೆಡ್ಡು ಹೊಡೆಯಲು ಜನಸಂಕಲ್ಪ ಯಾತ್ರೆಯನ್ನು ಸೋಮವಾರದಿಂದ ಪುನರಾರಂಭಿಸುತ್ತಿದೆ.

ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಜನಸಂಕಲ್ಪ ಯಾತ್ರೆ ಸಾಗಲಿದ್ದು, ಉಡುಪಿ, ಹಾವೇರಿ, ಬೆಳಗಾವಿ ಜಿಲ್ಲೆಗಳಲ್ಲಿ ಸಿಎಂ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.

ಇಂದು ದೆಹಲಿಯಿಂದ ಬೆಂಗಳೂರಿಗೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಲಿದ್ದು, ನ.8ರಿಂದ 11ರವರೆಗೆ ಕಲಬುರಗಿ, ಸಿಂದಗಿ, ದಾವಣಗೆರೆ, ತುಮಕೂರಲ್ಲಿ ನಡೆಯುವ ಜನಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.

ಇನ್ನು ಎರಡನೇ ಹಂತದ ಜನ ಸಂಪರ್ಕ ಸಭೆ ಬೆಳಗಾವಿ ಜಿಲ್ಲೆಯಲ್ಲಿ 9ರಂದು ನಡೆಯಲಿದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಮೂರು ಕಡೆಗಳಲ್ಲಿ ಸಭೆ ನಡೆಯಲಿದೆ. ಇದಾದ ಬಳಿಕ ಹೆಲಿಕಾಪ್ಟರ್ ಮೂಲಕ ಎರಡು ಗಂಟೆಗೆ ರಾಯಭಾಗಕ್ಕೆ ತೆರಳಿ ಅಲ್ಲಿ ಜನ ಸಂಪರ್ಕ ಸಭೆಯಲ್ಲಿ ಸಿಎಂ ಭಾಗಿಯಾಗಲಿದ್ದಾರೆ.

ಇದೇ ದಿನ ಸಂಜೆ ಖಾನಾಪುರ ಪಟ್ಟಣದಲ್ಲಿ ಸಭೆ ನಡೆಯಲಿದ್ದು ಬಿಜೆಪಿ ನಾಯಕರೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಒಂದೇ ದಿನ ಮೂರು ಕಡೆ ಸಭೆ ಮಾಡುವುದರ ಮೂಲಕ ಜಿಲ್ಲೆಯ ಬಿಜೆಪಿ ಕಾರ್ಯಕರ್ತರನ್ನ ಒಗ್ಗೂಡಿಸಿ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಸಿಎಂ ಸಂದೇಶ ನೀಡಲಿದ್ದಾರೆ.

ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿದ ಕಾರ್ಯಗಳು, ಯೋಜನೆಗಳನ್ನ ಜನರಿಗೆ ತಲುಪಿಸುವ ಸೂಚನೆ ಕೂಡ ನೀಡಲಿದ್ದಾರೆ. ಇನ್ನೂ ಜನ ಸಂಪರ್ಕ ಸಭೆಗೆ ಜಿಲ್ಲೆಯ ನಾಯಕರು ಕೂಡ ಈಗಾಗಲೇ ಸಿದ್ದತೆ ನಡೆಸಿದ್ದಾರೆ.

ಮಂಗಳವಾರದಿಂದ ಮೂರು ದಿನಗಳ ಕಾಲ ಬೊಮ್ಮಾಯಿ-ಯಡಿಯೂರಪ್ಪ ತಂಡದಿಂದ ಜನ ಸಂಕಲ್ಪ ಯಾತ್ರೆ ನಡೆಯಲಿದೆ. ಉಡುಪಿ, ಹಾವೇರಿ, ಬೆಳಗಾವಿ ಜಿಲ್ಲೆಗಳಲ್ಲಿ ಬೊಮ್ಮಾಯಿ-ಯಡಿಯೂರಪ್ಪ ಜಂಟಿ ಯಾತ್ರೆ ನಡೆಸಲಿದ್ದು ನವೆಂಬರ್ 8 ರಿಂದ 11 ರವರೆಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಿಂದ ಜನ ಸಂಕಲ್ಪ ಯಾತ್ರೆ ನಡೆಯಲಿದೆ.

ಮಂಗಳವಾರ ಗದಗ ಜಿಲ್ಲೆ ಶಿರಹಟ್ಟಿಯಲ್ಲಿ ಬೆಳಗ್ಗೆ 10.30ಕ್ಕೆ ಜನಸಂಕಲ್ಪ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಹಾವೇರಿಯ ಬ್ಯಾಡಗಿ ತಾಲೂಕು ಕ್ರೀಡಾಂಗಣದಲ್ಲಿ ಜನಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಗೂ ಬುಧುವಾರ ಬೆಳಗ್ಗೆ 10.30ಕ್ಕೆ ಬೆಳಗಾವಿಯಲ್ಲಿ ಜನಸಂಕಲ್ಪ ಕಾರ್ಯಕ್ರಮವಿದ್ದು ಮಧ್ಯಾಹ್ನ 1.30ಕ್ಕೆ ಬೆಳಗಾವಿ ಜಿಲ್ಲೆ ರಾಯಭಾಗದಲ್ಲಿ ಕಾರ್ಯಕ್ರಮವಿರಲಿದೆ.

SCROLL FOR NEXT