ರಾಜಕೀಯ

ಗುಂಡಿಗಳಿಂದ ತುಂಬಿರುವ ನಗರದ ರಸ್ತೆಗಳು ಸರಿಹೋಗಲು ತಿಂಗಳಿಗೊಮ್ಮೆ ಬೆಂಗಳೂರಿಗೆ ಬನ್ನಿ: ಪ್ರಧಾನಿ ಮೋದಿಗೆ ಆಪ್

Manjula VN

ಬೆಂಗಳೂರು: ಗುಂಡಿಗಳಿಂದ ತುಂಬಿರುವ ನಗರದ ರಸ್ತೆಗಳು ಸರಿಹೋಗಲು ತಿಂಗಳಿಗೊಮ್ಮೆ ಬೆಂಗಳೂರಿಗೆ ಬನ್ನಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಆಮ್ ಆದ್ಮಿ ಪಕ್ಷದ ಸದಸ್ಯರು ಒತ್ತಾಯಿಸಿದ್ದಾರೆ.

ಬೆಂಗಳೂರಿಗೆ ಪ್ರಧಾನಿ ಆಗಮನದ ಹಿಂದಿನ ದಿನವಾದ ಗುರುವಾರದಂದು ಬೆಳಗ್ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, (ಮೆಜೆಸ್ಟಿಕ್ ರೈಲು ನಿಲ್ದಾಣ) ಎದುರಿನ ರಸ್ತೆಯಲ್ಲಿ ಹಾಗೂ ಮಧ್ಯಾಹ್ನ ಮಲ್ಲೇಶ್ವರಂನ ದತ್ತಾತ್ರೇಯ ದೇವಸ್ಥಾನ ರಸ್ತೆಯಲ್ಲಿ ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಭಿತ್ತಿಪತ್ರಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ಇದರಂತೆ ರೈಲು ನಿಲ್ದಾಣದ ಸಮೀಪ ಪ್ರತಿಭಟಿಸಿದ ಎಎಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಆಮ್ ಆದ್ಮಿ ಪಕ್ಷದ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿ ಅವರು, “ಜನಸಾಮಾನ್ಯರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಸಾಲುಸಾಲು ವಾಹನ ಸವಾರರು ರಸ್ತೆ ಗುಂಡಿಗಳಿಗೆ ಬಿದ್ದು ಕೈಕಾಲು ಮುರಿದುಕೊಂಡರೂ ಸರ್ಕಾರ ತಲೆಕೆಡಿಸಿಕೊಂಡಿರಲಿಲ್ಲ. ಈಗ ಮೋದಿಯವರು ಬರುತ್ತಾರೆಂಬ ಕಾರಣಕ್ಕೆ ತರಾತುರಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತಿದೆ. ಅವರು ಸಂಚರಿಸುವ ರಸ್ತೆಗಳನ್ನು ಮಾತ್ರ ದುರಸ್ತಿ ಮಾಡಿ, ಉಳಿದ ರಸ್ತೆಗಳ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ. ಮೋದಿಯವರನ್ನು ಮೆಚ್ಚಿಸಿ, ಮುಂದಿನ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗುವುದೇ ಬೊಮ್ಮಾಯಿಯವರ ಏಕೈಕ ಉದ್ದೇಶ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.

“ಮೋದಿಯವರು ಬರುತ್ತಾರೆಂದು ಮುಚ್ಚಿದ ಗುಂಡಿಗಳು ಅವರು ದೆಹಲಿಗೆ ವಾಪಸಾದ ಕೆಲವೇ ದಿನಗಳಲ್ಲಿ ಮತ್ತೆ ಬಾಯಿ ತೆರೆಯಲಿವೆ. ಗುಣಮಟ್ಟ ಕಾಯ್ದುಕೊಳ್ಳದೇ ಅವಸರದಲ್ಲಿ ಮಾಡಿದ ಕಾಮಗಾರಿಗಳು ಒಂದು ತಿಂಗಳು ಬಾಳಿಕೆ ಬರುವುದೂ ಅನುಮಾನ. ಮೋದಿಯವರು ಈ ಹಿಂದೆ ರಾಜ್ಯಕ್ಕೆ ಬಂದಾಗಲೂ ನಾವಿದನ್ನು ಗಮನಿಸಿದ್ದೇವೆ. ಆದ್ದರಿಂದ ಪ್ರಧಾನಿ ಮೋದಿಯವರು ತಿಂಗಳಿಗೊಮ್ಮೆ ಬೆಂಗಳೂರಿಗೆ ಬಂದು ಇಲ್ಲಿನ ಎಲ್ಲ ರಸ್ತೆಗಳಲ್ಲಿ ಸಂಚರಿಸಬೇಕು. ಇಲ್ಲದಿದ್ದರೆ ಇಲ್ಲಿನ ಸಿಎಂ, ಸಚಿವರು ಹಾಗೂ ಶಾಸಕರು ನಿದ್ರಾವಸ್ಥೆಯಲ್ಲಿ ಇರುತ್ತಾರೆಂದು ತಿಳಿಸಿದ್ದಾರೆ.

ರಸ್ತೆ ಗುಂಡಿ ಮುಚ್ಚುವ ಕಾರ್ಯಗಳು ಪ್ರಗತಿಯಲ್ಲಿದೆ: ಸಿಎಂ ಬೊಮ್ಮಾಯಿ
ರಸ್ತೆ ಗುಂಡಿ ಮುಚ್ಚುತ್ತಿರುವ ಕುರಿತು ವಿಪಕ್ಷಗಳಿಂದ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿಯವರು, ರಸ್ತೆ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ 3-4 ದಿನಗಳಲ್ಲಿ ಎಲ್ಲಾ ರಸ್ತೆಗಳ ಗುಂಡಿಗಳನ್ನೂ ಮುಚ್ಚಲಾಗುತ್ತದೆ ಎಂದರು.

SCROLL FOR NEXT