ರಾಜಕೀಯ

ನಾಮಪತ್ರ ಸಲ್ಲಿಸಲು ಮತ್ತೆ ಬರುತ್ತೇನೆ, ನೀವೆಲ್ಲರೂ ಕಾಂಗ್ರೆಸ್ ಗೆಲ್ಲಿಸಬೇಕು: ಸಿದ್ದರಾಮಯ್ಯ

Sumana Upadhyaya

ಕೋಲಾರ: ಚಿನ್ನದ ನಾಡು ಕೋಲಾರದಲ್ಲಿ ಇಂದು ಭಾನುವಾರ ಮಾಜಿ ಸಿಎಂ ಸಿದ್ದರಾಮಯ್ಯ 2023ರ ಚುನಾವಣಾ ರಂಗ ತಾಲೀಮು ಆರಂಭಿಸಿರುವ ಲಕ್ಷಣ ಕಾಣುತ್ತಿದೆ. ಇಂದು ಬೆಳಗ್ಗೆ ಕೋಲಾರಕ್ಕೆ ತಮ್ಮ ಆಪ್ತರೊಂದಿಗೆ ವಿಶೇಷ ಬಸ್ಸಿನಲ್ಲಿ ಬಂದ ಅವರು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಕೋಲಾರ ಮೆಥೋಡಿಸ್ಟ್ ಚರ್ಚಿಗೆ ಭೇಟಿ ನೀಡಿದ ನಂತರ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ನಿಮ್ಮ ಅಭಿಮಾನಕ್ಕೆ ನಾನು ಆಭಾರಿಯಾಗಿದ್ದೇನೆ. ನಾನು  5ವರ್ಷ ಈ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದು ಯಾವುದೇ ಒಂದು ಜಾತಿ, ಧರ್ಮದ ಪರವಾಗಿ ಕೆಲಸ ಮಾಡಿರಲಿಲ್ಲ, ಸರ್ವಧರ್ಮಗಳಿಗೂ ನ್ಯಾಯ ಒದಗಿಸಲು ಪ್ರಯತ್ನ ಮಾಡಿದ್ದೇನೆ ಎಂದರು.

ನಾಮಪತ್ರ ಹಾಕಲು ಬರುತ್ತೇನೆ: ಇದೇ ಸಂದರ್ಭದಲ್ಲಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪ್ರಯತ್ನಿಸಬೇಕು ಎಂದ ಅವರು ಇವತ್ತು ನಿಮ್ಮೆಲ್ಲರನ್ನು ಭೇಟಿ ಮಾಡಲು ಬಂದಿದ್ದೇನೆ, ಮತ್ತೊಮ್ಮೆ ನಾಮಿನೇಷನ್ ಹಾಕಲು ಬರುತ್ತೇನೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧಿಸುವುದು ಬಹುತೇಕ ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದೆ.

ಬಳಿಕ ಮಾಧ್ಯಮದವರು ಅವರನ್ನು ಪ್ರಶ್ನಿಸಿದಾಗ, ಇನ್ನೂ ನಿರ್ಧಾರ ಮಾಡಿಲ್ಲ, ಎಲೆಕ್ಷನ್ ನಾಮಿನೇಷನ್ ಹಾಕಿ ಬಂದಾಗ ಇನ್ನೊಮ್ಮೆ ಬರುತ್ತೇನೆ ಎಂದು ಹೇಳಿದ್ದು ಎಂದು ಕುತೂಹಲವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

SCROLL FOR NEXT