ರಾಜಕೀಯ

ಬಿಜೆಪಿ ಸಂಸದರಿಂದ ಸಿದ್ದರಾಮಯ್ಯ ಆಪ್ತ ಕೆಎನ್ ರಾಜಣ್ಣ ಭೇಟಿ: ಮಾತೃ ಪಕ್ಷದತ್ತ ಜಿ ಎಸ್ ಬಸವರಾಜು ಚಿತ್ತ!

Shilpa D

ತುಮಕೂರು: ಬಿಜೆಪಿ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಅವರು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಆಪ್ತ ಮಾಜಿ ಶಾಸಕ ಕೆ ಎನ್ ರಾಜಣ್ಣ ಅವರನ್ನು ಮಂಗಳವಾರ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಜಿಎಸ್ ಬಸವರಾಜು ಕಾಂಗ್ರೆಸ್ ಪಕ್ಷಕ್ಕೆ ಮರಳಬಹುದು ಎಂಬ ವದಂತಿಗಳು ಹಬ್ಬಿವೆ. 2024 ರ ಸಾರ್ವತ್ರಿಕ ಚುನಾವಣೆಗೆ ಬಿಜೆಪಿಯು ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿಲ್ಲ ಎಂಬ ಹಿನ್ನೆಲೆಯಲ್ಲಿ ಮತ್ತೆ ಕಾಂಗ್ರೆಸ್ ಗೆ ಮರಳಲು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ತಮ್ಮ ಪುತ್ರ ಮತ್ತು ತುಮಕೂರು ನಗರ ಬಿಜೆಪಿ ಶಾಸಕ ಜಿ ಬಿ ಜ್ಯೋತಿಗಣೇಶ್ ಅವರ ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಲು ಪ್ರಯತ್ನಿಸುತ್ತಿರುವ ಜಿಎಸ್ ಬಸವರಾಜು ತಾವು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಇತ್ತೀಚೆಗೆ ಘೋಷಿಸಿದ್ದರು.

ಮೂಲಗಳ ಪ್ರಕಾರ, 2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಜ್ಯೋತಿಗಣೇಶ್ ಅವರಿಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದರೆ, ಬಸವರಾಜು ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲವನ್ನು ನೀಡಬಹುದು.

ಹಿರಿಯ ಲಿಂಗಾಯತ ನಾಯಕರಾಗಿರುವ ಬಸವರಾಜ್ ಜಿಲ್ಲೆಯಲ್ಲಿ ತಮ್ಮ ಆದ ಪ್ರಭಾವವನ್ನು ಹೊಂದಿದ್ದಾರೆ. ಅವರ ಪಕ್ಷವನ್ನು ಬದಲಾಯಿಸುವುದರಿಂದ ಜಿಲ್ಲೆಯ 11 ಕ್ಷೇತ್ರಗಳ ಪೈಕಿ 2-3 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಸಹಾಯವಾಗಲಿದೆ.

ಬಸವರಾಜು ಮೂಲತಃ ಕಾಂಗ್ರೆಸ್‌ನಲ್ಲಿದ್ದರು, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಕೆಜೆಪಿಗೆ ಸೇರಿದ್ದರು, ಅಂತಿಮವಾಗಿ ಬಿಜೆಪಿಗೆ ಬಂದರು. ಈಗ ಬಿಜೆಪಿಯಿಂದ ಯಡಿಯೂರಪ್ಪ ಸಿಎಂ ಅಭ್ಯರ್ಥಿ ಅಲ್ಲದ ಕಾರಣ ಬಸವರಾಜು ಅವರೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

2019 ರ ಲೋಕಸಭಾ ಚುನಾವಣೆಯಲ್ಲಿ  ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಸೋಲಿಸಲು ಕೆಎನ್ ರಾಜಣ್ಣ ಸಹಾಯ ಮಾಡಿದ್ದರು. ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ ಅವರನ್ನು ಕಾಂಗ್ರೆಸ್‌ಗೆ ಮರಳಿ ಕರೆತರಲು ರಾಜಣ್ಣ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯ ಸಂಸ್ಥೆಗಳಿಂದ ಎಂಎಲ್‌ಸಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಸವರಾಜು ಅವರು ರಾಜಣ್ಣ ಪುತ್ರ ರಾಜೇಂದ್ರಗೆ ಬೆಂಬಲ ನೀಡಿದ್ದರು.

SCROLL FOR NEXT