ರಾಜಕೀಯ

ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಗೆ ಕಲಬುರಗಿ ಪೊಲೀಸರಿಂದ ಗಡಿಪಾರು ಆದೇಶ!

Shilpa D

ಕಲಬುರಗಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿಜೆಪಿ ಮುಖಂಡ ಮಣಿಕಾಂತ್‌ ರಾಥೋಡ್‌ ಅವರನ್ನು ಕಲಬುರಗಿ ಜಿಲ್ಲೆಯಿಂದ ಒಂದು ವರ್ಷ ಗಡಿಪಾರು ಮಾಡಲಾಗಿದೆ.

ಪಡಿತರ ಅಕ್ಕಿ ಕಳ್ಳಸಾಗಾಟ, ಜನರಿಗೆ ಬೆದರಿಕೆ ಹಾಕಿದ ಆರೋಪ ಸೇರಿದಂತೆ ವಿವಿಧ 20 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಮಣಿಕಂಠ ರಾಠೋಡನನ್ನು ಶಿವಮೊಗ್ಗ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದು ಕಲಬುರಗಿ ನಗರ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯೂ ಆದ ಡಿಸಿಪಿ ಅಡ್ಡೂರು ಶ್ರೀನಿವಾಸುಲು ಅವರು ಆದೇಶದಲ್ಲಿ ವಿವರಿಸಿದ್ದಾರೆ.

ಗಡಿಪಾರು ಮಾಡಿರುವ ಒಂದು ವರ್ಷದ ಅವಧಿಯಲ್ಲಿ ಮಣಿಕಾಂತ್ ರಾಥೋಡ್ ಶಿವಮೊಗ್ಗ ಜಿಲ್ಲೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೇ ವಾಸಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಕಲಬುರಗಿ ತೊರೆದು ಶಿವಮೊಗ್ಗಕ್ಕೆ ತೆರಳಲು ಆರೋಪಿಗೆ ಪೊಲೀಸರು ಮೂರು ದಿನ ಸಮಯಾವಕಾಶ ನೀಡಿದ್ದಾರೆ,  ಮಂಗಳವಾರ ಗಡುವು ಮುಗಿಯಲಿದೆ, ಒಂದು ವೇಳೆ ಆತ ಕಲಬುರಗಿ ನಗರ ತೊರೆಯದಿದ್ದರೇ ಬಲವಂತವಾಗಿ ಪೊಲೀಸರು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲಿದ್ದಾರೆ.

ತನ್ನ ಮೇಲೆ ಹಾಕಿರುವ ಗಡಿಪಾರು ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ರಾಥೋಡ್ ಮುಂದಾಗಿದ್ದಾರೆ ಎಂದು ಆತನ ಆಪ್ತ ಮೂಲಗಳು ತಿಳಿಸಿವೆ. ರಾಥೋಡ್ ಬಿಜೆಪಿಯ ಸದಸ್ಯರಾಗಿದ್ದು, ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಯೋಜಿಸುತ್ತಿರುವು ಸತ್ಯ, ಈ ಬಗ್ಗೆ ಪಕ್ಷ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ ಎಂದು  ಕಲಬುರಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ  ಶಿವರಾಜ್ ಪಾಟೀಲ್ ರದ್ದೇವಾಡಗಿ ತಿಳಿಸಿದ್ದಾರೆ.

ಅಕ್ರಮ‌ ಪಡಿತರ ಅಕ್ಕಿ ಸಾಗಾಟ, ಜೀವ ಬೆದರಿಕೆ  ಸೇರಿದಂತೆ ಮೂರು ಜಿಲ್ಲೆಯ ಹಲವಡೆ ವಿವಿಧ ಪ್ರಕರಣಗಳನ್ನು ಮಣಿಕಂಠ ರಾಥೋಡ ಎದುರಿಸುತ್ತಿದ್ದಾರೆ. ಮಣಿಕಂಠ ರಾಠೋಡ ಮೂಲತಃ ಯಾದಗಿರಿ ಜಿಲ್ಲೆ ಗುರುಮಠಕಲ್‌ನ ನಿವಾಸಿಯಾಗಿದ್ದಾರೆ.

SCROLL FOR NEXT