ರಾಜಕೀಯ

'ನೀವು ಸ್ಟ್ರಾಂಗ್ ಇದ್ದಿದ್ದರೆ ಸಿಎಂ ಸ್ಥಾನಕ್ಕೆ ಬೀದಿಗೆ ಬಂದು ಇಷ್ಟೊಂದು ಕಸರತ್ತು ಪಡಬೇಕಿರಲಿಲ್ಲ’: ಬಿಜೆಪಿ

Shilpa D

ಬೆಂಗಳೂರು: ಬಿಜೆಪಿ ನಾಯಕರ ಬಗ್ಗೆ ಭಯ ಇರುವ ಕಾರಣದಿಂದಲೇ ಸಿದ್ದರಾಮಯ್ಯ ಅವರು ಇಳಿ ವಯಸ್ಸಿನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ‌ವ್ಯಂಗ್ಯವಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ಸಿದ್ದರಾಮಯ್ಯನವರೇ, ಬಿಜೆಪಿ ನಾಯಕರ ಬಗ್ಗೆ ಭಯ ಇರುವ ಕಾರಣದಿಂದಲೇ ಈ ಇಳಿ ವಯಸ್ಸಿನಲ್ಲಿ ಕಷ್ಟವಾದರೂ ಬಲವಂತದ ಪಾದಯಾತ್ರೆ ಮಾಡುತ್ತಿದ್ದೀರಿ. ನೀವು ಮೋರ್ ಸ್ಟ್ರಾಂಗ್ ಅಂತ ಹೇಳಿಕೊಂಡಿದ್ದೀರಿ, ನೀವು ಸ್ಟ್ರಾಂಗ್ ಇದ್ದಿದ್ದರೆ ಸಿಎಂ ಸ್ಥಾನಕ್ಕೆ ಬೀದಿಗೆ ಬಂದು ಇಷ್ಟೊಂದು ಕಸರತ್ತು ಪಡಬೇಕಿರಲಿಲ್ಲ’ ಎಂದು ಬಿಜೆಪಿ ಟಾಂಗ್ ನೀಡಿದೆ..

ಭಾರತ್ ಜೋಡೊ ಯಾತ್ರೆಯನ್ನು ಕಂಡು ಬಿಜೆಪಿಗರಿಗೆ ನಡುಕ ಶುರುವಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಬೆಳಿಗ್ಗೆ ಎದ್ದ ತಕ್ಷಣ ಎಲ್ಲರೂ ದೇವರನ್ನು ನೆನೆಯುತ್ತಾರೆ. ಆದರೆ, ಬಾಲಕನ (ರಾಹುಲ್ ಗಾಂಧಿ) ಜೊತೆ ಓಡುವ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ಜಪ ಮಾಡುತ್ತಿರುವುದನ್ನು ನೋಡಿದರೆ, ಬಿಜೆಪಿ ನಾಯಕರನ್ನೇ ದೇವರು ಅಂದುಕೊಂಡ ಹಾಗಿದೆ’ ಎಂದು ಬಿಜೆಪಿ ಲೇವಡಿ ಮಾಡಿದೆ.

'ನನ್ನನ್ನು ಕಂಡರೆ ಬಿಜೆಪಿ ನಾಯಕರಿಗೆ ಭಯ. ಬಲಶಾಲಿಯಾದವರಿಗೆ ಶತ್ರುಗಳು ಹೆಚ್ಚು. ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು ವಿಷಯಾಧಾರಿತ ಚರ್ಚೆಗೆ ಬನ್ನಿ. ವ್ಯಾಪಕವಾಗಿರುವ ಭಷ್ಟಾಚಾರದ ಕುರಿತು ಮಾತನಾಡಿ' ಎಂದು ಬಿಜೆಪಿಗೆ ಸವಾಲು ಹಾಕಿದ್ದರು.

ಇನ್ನೂ ಕಾಂಗ್ರೆಸ್ ಪಾದಯಯಾತ್ರೆಯ ಬಗ್ಗೆ ಪ್ರತಿಕ್ರಿಯಿಸಿರುವ ನಳೀನ್ ಕುಮಾರ್ ಕಟೀಲ್ , ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಯುವನಾಯಕ ಸಚಿನ್ ಪೈಲೆಟ್ ಅವರನ್ನು ಸಿಎಂ ಮಾಡುತ್ತೇನೆ ಎಂದು ಕೊಟ್ಟ ಭರವಸೆಯನ್ನು ಯಾರದ್ದೋ ಬ್ಲ್ಯಾಕ್ ಮೇಲ್ ಗೆ ಹೆದರಿ ಹಿಂದೆ ಪಡೆದುಕೊಂಡ  ರಾಹುಲ್ ಗಾಂಧಿ ಅವರಿಗೆ ತಮ್ಮ ಪಕ್ಷದಲ್ಲಿಯೇ ಯುವಕರಿಗೆ ಸ್ಥಾನಮಾನ ಕೊಡಲು ಸಾಧ್ಯವಾಗುತ್ತಿಲ್ಲ, ಹಾಗಿರುವಾಗ‌ ದೇಶದ ಯುವಜನಾಂಗಕ್ಕೆ ಅವರು ಏನು ಭವಿಷ್ಯ ನೀಡಬಲ್ಲರು? ಎಂದು ಪ್ರಶ್ನಿಸಿದ್ದಾರೆ.

ನಕಲಿ ಗಾಂಧಿ ಕುಟುಂಬಕ್ಕೆ ಅಧಿಕಾರ ನೀಡಲು ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದ  ಹಿರಿಯರಾದ ಮಾಧವರಾವ್ ಸಿಂಧಿಯಾ, ರಾಜೇಶ್ ಪೈಲೆಟ್ ಸಹಿತ ಅನೇಕ ನೈಜ ಮುಖಂಡರ ಅಂತ್ಯದ ಹಿಂದೆ ಯಾರ ಕೈವಾಡ ಇದೆ ಎಂದು ರಾಹುಲ್ ಅವರಿಗೆ ಪ್ರಶ್ನಿಸಿ ಸಮರ್ಪಕ ಉತ್ತರ ಸಿಕ್ಕಿದರೆ ಮಾತ್ರ ಹೆಜ್ಜೆ ಹಾಕಿ.  ಆತ್ಮವಂಚನೆಯ ಪಾದಯಾತ್ರೆ ಯಾಕೆ? ಎಂದು ಲೇವಡಿ ಮಾಡಿದ್ದಾರೆ.

SCROLL FOR NEXT