ರಾಜಕೀಯ

2023 ವಿಧಾನಸಭೆ ಚುನಾವಣೆ ಮೇಲೆ ಕಣ್ಣು: ಹಳೇ ಮೈಸೂರು ಭಾಗದಲ್ಲಿ ವಿವಿ ನಿರ್ಮಾಣ ಭರವಸೆ ನೀಡಿದ ಹೆಚ್'ಡಿಕೆ

Manjula VN

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೂ ಹಳೇ ಮೈಸೂರು ಭಾಗದಲ್ಲಿ ತನ್ನ ನೆಲೆಯನ್ನು ಗಟ್ಟಿಗೊಳಿಸಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ಹಳೇ ಮೈಸೂರು ಭಾಗದಲ್ಲಿ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ. 

ಬೆಂಗಳೂರಿನ ಬಸವನಗುಡಿಯ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಪಂಚರತ್ನ ರಥಯಾತ್ರೆಗೆ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಪಕ್ಷ ಅಧಿಕಾರಕ್ಕೆ ಬಂದರೆ ಮಾಗಡಿಯಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸಲಾಗುವುದು ಎಂದು ಘೋಷಿಸಿದರು.

ಬಳಿಕ ಒಕ್ಕಲಿಗ ಸಮುದಾಯವನ್ನು ಓಲೈಸುವ ಉದ್ದೇಶದಿಂದ, ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಒಕ್ಕಲಿಗರ ಮೀಸಲಾತಿಯನ್ನು ಶೇ.4ರಿಂದ 10ಕ್ಕೆ ಹೆಚ್ಚಿಸಲು ಬದ್ಧ ಎಂದು ಹೇಳಿದರು. 

ಇದೇ ವೇಳೆ ಆಶ್ಚರ್ಯಕರ ಎಂಬಂತೆ ರ್ಯಾಲಿಯಲ್ಲಿ ಭಾಗಿಯಾಗಿದ್ದ ಬಿಜೆಪಿ ನಾಯಕ ಆಗ್ನೇಯ ಪದವೀಧರ ಕ್ಷೇತ್ರದ ಎಂಎಲ್‌ಸಿ ಚಿದಾನಂದ ಗೌಡ ಅವರು ಕುಮಾರಸ್ವಾಮಿಯವರಿಗೆ ಬೆಂಬಲ ವ್ಯಕ್ತಪಡಿಸಿ, ಕುಮಾರಸ್ವಾಮಿಯವರು ಮತ್ತೊಮ್ಮೆ ಮುಖ್ಯಮಂತ್ರಿಯಾದರೆ, ಅವರಿಗಿಂತ ನನಗೆ ಹೆಚ್ಚು ಖುಷಿಯಾಗುತ್ತದೆ ಎಂದು ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದರು. 

ಈ ಬೆಳವಣಿಗೆ ಈ ಪ್ರದೇಶದಲ್ಲಿ ತನ್ನ ನೆಲೆಯನ್ನು ಬಲಪಡಿಸಲು ಎಲ್ಲಾ ಪ್ರಯತ್ನ ಮಾಡುತ್ತಿರುವ ಬಿಜೆಪಿಗೆ ಆತಂಕವನ್ನು ತಂದೊಡ್ಡಿದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಅಶ್ವತ್ಥ್ ನಾರಾಯಣ್ ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಮೇಲೆ ನಿರೀಕ್ಷೆಯನ್ನು ಇಟ್ಟುಕೊಂಡು ಕ್ಷೇತ್ರದಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಇದರಂತೆ ಮೈಸೂರಿನಲ್ಲಿ ಎಸ್‌ಸಿ ಸಮುದಾಯದ ಸಮಾವೇಶ ನಡೆಸಲು ಬಿಜೆಪಿ ಮುಂದಾಗಿದೆ.

SCROLL FOR NEXT