ರಾಜಕೀಯ

ಸಂಪುಟ ವಿಸ್ತರಣೆ ಸರ್ಕಸ್: ಬೆಳೆಯುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ; ಸಿಎಂ ಬೊಮ್ಮಾಯಿಗೆ ಹೆಚ್ಚು'ವರಿ'ಯಾಗಿ ಖಾತೆಗಳ ಜವಾಬ್ದಾರಿ!

Shilpa D

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವಾರ ದೆಹಲಿಗೆ ಭೇಟಿ ನೀಡಿ ಸಂಪುಟ ವಿಸ್ತರಣೆ ಕುರಿತು ಬಿಜೆಪಿಯ ವರಿಷ್ಠರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ. ಕಳೆದ ವಾರ, ಬೊಮ್ಮಾಯಿ ಅವರು ವಿಧಾನಸಭೆ ಅಧಿವೇಶನ ಮುಗಿಯಲು ಕಾಯುತ್ತಿರುವುದಾಗಿ ಹೇಳಿದ್ದರು.

ಬಿಜೆಪಿ ಕೇಂದ್ರ ನಾಯಕರು ಕೂಡ ಸಂಪುಟ ವಿಸ್ತರಣೆಗೆ ಉತ್ಸುಕರಾಗಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದರು.  ರಮೇಶ್ ಜಾರಕಿಹೊಳಿ ಮತ್ತು ಕೆಎಸ್ ಈಶ್ವರಪ್ಪ ರಾಜೀನಾಮೆ ನೀಡಿದ್ದು, ಸಚಿವ ಉಮೇಶ್ ಕತ್ತಿ ನಿಧನರಾಗಿದ್ದಾರೆ.

ಹೀಗಾಗಿ ಬೊಮ್ಮಾಯಿ ಅವರು ತಮ್ಮ ಹಿಂದಿನ ಹಣಕಾಸು ಮತ್ತು ಬೆಂಗಳೂರು ಅಭಿವೃದ್ಧಿ ಖಾತೆಗಳೊಂದಿಗೆ ಹಲವಾರು ಮಹತ್ವದ ಪೋರ್ಟ್‌ಫೋಲಿಯೊಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಬೊಮ್ಮಾಯಿ ಅರಣ್ಯ ಖಾತೆ ಜೊತೆಗೆ ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಗಳನ್ನು ಹೊಂದಿದ್ದಾರೆ.

ವಿಧಾನಸಭೆ ಚುನಾವಣೆಗೆ ಇನ್ನೂ ಏಳು ತಿಂಗಳು ಬಾಕಿ ಉಳಿದಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರಮಣಕಾರಿ ಪ್ರಚಾರ ಮಾಡುತ್ತಿದೆ.  ಹೀಗಾಗಿ ಬೊಮ್ಮಾಯಿ ಅವರು ಹಲವು ಹುದ್ದೆಗಳನ್ನು ನಿಭಾಯಿಸಲು ಹೆಣಗಾಡುತ್ತಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.

ಬಸವರಾಜ ಬೊಮ್ಮಾಯಿ ಅವರ ಮೇಲಿನ ಹೆಚ್ಚುವರಿ ಕೆಲಸಗಳನ್ನು ಪಕ್ಷದ ಹೈಕಮಾಂಡ್ ಕೂಡ ಗಮನಿಸುತ್ತಿದೆ. ಬೊಮ್ಮಾಯಿ ಅಧಿವೇಶನ ಮುಗಿಯುವುದನ್ನೇ ಕಾಯುತ್ತಿದ್ದರು. ಈ ವಾರ ಅವರು ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ, ಸದ್ಯ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಾರ್ಯಕ್ರಮಗಳಲ್ಲಿ ನಿರತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಬಿಬಿಎಂಪಿ ಚುನಾವಣೆ ಘೋಷಣೆಯಾದರೆ, ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವ ಸಿಎಂ ರಾಜ್ಯ ರಾಜಧಾನಿಯತ್ತಲೂ ಗಮನ ಹರಿಸಬೇಕಾಗಿದೆ. ಆದರೆ ಬಿಬಿಎಂಪಿ ಚುನಾವಣೆಗೆ ದಿನಾಂಕ ಅಂತಿಮಗೊಂಡಿಲ್ಲ. ದೆಹಲಿಯ ಪಕ್ಷದ ನಾಯಕರ ಒಪ್ಪಿಗೆಗಾಗಿ ಸಿಎಂ ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಖಚಿತವಾಗಿದ್ದು, ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ.

SCROLL FOR NEXT