ರಾಜಕೀಯ

ರಾಜ್ಯ ರಾಜಕಾರಣಕ್ಕೆ ಸಂಸದೆ ಸುಮಲತಾ; ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕೇಸರಿ ಪಾಳಯ ಚಿಂತನೆ

Ramyashree GN

ಬೆಂಗಳೂರು: ದಕ್ಷಿಣ ಕರ್ನಾಟಕ ಭಾಗದಲ್ಲಿ ಅದರಲ್ಲೂ ಜೆಡಿಎಸ್ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ಮಂಡ್ಯ ಜಿಲ್ಲೆಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಶತಾಯಗತಾಯ ಗೆಲ್ಲಬೇಕು ಎಂದುಕೊಂಡಿರುವ ಬಿಜೆಪಿ, ಸಂಸದೆ ಸುಮಲತಾ ಅಂಬರೀಶ್ ಅವರನ್ನು ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯ ರಾಜಕಾರಣಕ್ಕೆ ಕರೆತರಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸುಮಲತಾ ಅವರನ್ನು ಕಣಕ್ಕಿಳಿಸಲು ಕೇಸರಿ ಪಕ್ಷ ಮುಂದಾಗಿದೆ ಎಂದು ಬಿಜೆಪಿ ಒಳಗಿನವರು ವಿವರಿಸಿದ್ದಾರೆ.

ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವುದು ಮಾತ್ರವಲ್ಲದೆ, ಜಿಲ್ಲೆಯ ಇತರ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಟಾರ್ ಪ್ರಚಾರಕಿಯಾಗಿಯೂ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ. ಸುಮಲತಾ ಅವರು ಇತ್ತೀಚೆಗೆ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. 

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. ಅವರ ಉಮೇದುವಾರಿಕೆಗೆ ಕೇಸರಿ ಪಕ್ಷ ಬೆಂಬಲ ಘೋಷಿಸಿತ್ತು. 2019 ರ ಚುನಾವಣೆಯಲ್ಲಿ ಅವರು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದರು. ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಒಕ್ಕಲಿಗ ಸಮುದಾಯದ ನಾಯಕ ಎಂದೇ ಪರಿಗಣಿಸಲ್ಪಟ್ಟಿದ್ದ ಕನ್ನಡದ ದಿವಂಗತ ಸೂಪರ್‌ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ. ಅಂಬರೀಶ್ ಅವರು ಸುಮಾರು ಮೂರು ದಶಕಗಳ ಕಾಲ ರಾಜಕೀಯ ವೃತ್ತಿಜೀವನವನ್ನು ನಡೆಸಿದ್ದರು ಮತ್ತು ಅಪಾರ ಸಂಖ್ಯೆಯ ಬೆಂಬಲಿಗರು ಮತ್ತು ಅಭಿಮಾನಿಗಳ ಬಳಗವನ್ನು ಹೊಂದಿದ್ದರು. ಇವರು ಮಂಡ್ಯದಿಂದ ಬಂದವರು.

57 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುನ್ನಡೆ ಸಾಧಿಸಲು ನಿರ್ಧರಿಸಿದ್ದಾರೆ. ಇಲ್ಲಿಂದ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಭರವಸೆಯನ್ನು ಬಿಜೆಪಿ ಹೊಂದಿದೆ.

ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ತಲಾ ಏಳು ವಿಧಾನಸಭಾ ಸ್ಥಾನಗಳಿವೆ. ಈ ಜಿಲ್ಲೆಗಳಲ್ಲಿ ಬಿಜೆಪಿ ತಲಾ ಒಂದು ಸ್ಥಾನವನ್ನು ಗೆದ್ದುಕೊಂಡಿದ್ದು, ಉಳಿದ ಸ್ಥಾನಗಳು ಜೆಡಿಎಸ್‌ ಪಾಲಾಗಿದೆ.

ಸುಮಲತಾ ಅವರ ಆಗಮನದಿಂದ ದಕ್ಷಿಣದ ಜಿಲ್ಲೆಗಳ ಲೆಕ್ಕಾಚಾರವೇ ಬದಲಾಗುವ ನಿರೀಕ್ಷೆ ಇದೆ. ಸಂಸದೆ ಪ್ರಚಾರ ನಡೆಸುತ್ತಿರುವುದು ಒಕ್ಕಲಿಗ ಮತಬ್ಯಾಂಕ್ ಕ್ರೋಢೀಕರಿಸಲು ಸಹಕಾರಿಯಾಗಲಿದೆ.

ಇದೀಗ ಅವರನ್ನು ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಒಕ್ಕಲಿಗ ಪ್ರತಿನಿಧಿಯನ್ನಾಗಿ ಬಿಂಬಿಸಲು ಕೇಸರಿ ಪಕ್ಷ ಮುಂದಾಗಿದೆ.

SCROLL FOR NEXT