ರಾಜಕೀಯ

ಕುಸಿಯುತ್ತಿದ್ಯಾ ದಳಪತಿಗಳ ಸಾಮ್ರಾಜ್ಯ?: 40 ರಿಂದ 31ಕ್ಕಿಳಿದ ಜೆಡಿಎಸ್ ಶಾಸಕರ ಸಂಖ್ಯೆ; ಎಚ್ ಡಿಕೆ 'ಕಿಂಗ್ ಮೇಕರ್' ಕನಸು ಭಗ್ನ!

Shilpa D

ಬೆಂಗಳೂರು: 2018 ರ ವಿಧಾನಸಭೆ ಚುನಾವಣೆಯಲ್ಲಿ40 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್ ಕಾಂಗ್ರೆಸ್ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿತ್ತು.

ಆದರೆ ಅದಾದ ನಂತರ ರಾಜಕೀಯ ಬೆಳವಣಿಗೆಗಳಲ್ಲಿ ಹಲವು ಶಾಸಕರು ಜೆಡಿಎಸ್ ತೊರೆದು ಈಗ ಒಟ್ಟು ಶಾಸಕರ ಸಂಖ್ಯೆ 31ಕ್ಕೆ ಕುಸಿದಿದೆ.

ಇತ್ತೀಚೆಗೆ ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ ಜೆಡಿಎಸ್ ತೊರೆದಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಶಾಸಕರ ಸಂಖ್ಯೆ ಮತ್ತಷ್ಟು ಕುಸಿಯಲಿದೆ ಎಂದಿದ್ದಾರೆ.

ಜೆಡಿಎಸ್ ಪಕ್ಷ ಕರಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿಧಾನಸಭೆಯ ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪೂರ್, ಈ ಶಾಸಕರು ನಿರ್ಗಮಿಸುವುದರಿಂದ ಪಕ್ಷದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.

ನಾವು 93 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದೇವೆ ಅವರಲ್ಲಿ ಯಾರಾದರೂ ಪಕ್ಷ ತೊರೆದಿದ್ದಾರೆಯೇ?, ಇಲ್ಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರಿಲ್ಲದ ಈ ವ್ಯಕ್ತಿಗಳು ಮಾತ್ರ ಜೆಡಿಎಸ್ ತೊರೆದಿದ್ದಾರೆ, ಅದರಿಂದ  ನಮಗೆ ತೊಂದರೆಯಾಗುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಕಾಂಗ್ರೆಸ್-ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿರುವ ಮನೋಹರ್ ತಹಶೀಲ್ದಾರ್ ಅವರಂತ ಅನೇಕ ನಾಯಕರು ನಮ್ಮಲ್ಲಿದ್ದು, ನಮ್ಮ ಶಾಸಕರ ಗೆಲುವಿನ ಸಂಖ್ಯೆ ಹೆಚ್ಚಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಜೆಡಿಎಸ್ ತೊರೆದು ಹೋಗಿರುವ ಇವರೆಲ್ಲ ಮತ್ತೆ ಗೆಲುವು ಸಾಧಿಸುವುದು ಕಷ್ಟ ಎಂದಿದ್ದಾರೆ.

ನನ್ನ ಸ್ವಂತ ಕ್ಷೇತ್ರ ಹಾಗೂ ಶಿವಲಿಂಗೇಗೌಡರ ಕ್ಷೇತ್ರದಲ್ಲಿ ಜೆಡಿಎಸ್‌ನ ಪ್ರಮುಖ ಬೆಂಬಲಿಗರಾಗಿರುವ ಒಕ್ಕಲಿಗರನ್ನು ಹೊರತುಪಡಿಸಿ ಇತರೆ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿವೆ. 1991ರಲ್ಲಿ ದೇವೇಗೌಡರು ಇಲ್ಲಿ ಸ್ಪರ್ಧಿಸಿ ಅರಸೀಕೆರೆ ಭಾಗದಲ್ಲಿ ಕೇವಲ 13 ಸಾವಿರ ಮತ ಗಳಿಸಿದ್ದರು. 2004ರಲ್ಲಿ ಜೆಡಿಎಸ್‌ನ ಮತಗಳಿಕೆ 22 ಸಾವಿರಕ್ಕಿಂತ ಹೆಚ್ಚಾಗಿತ್ತು.

ಏಕೆಂದರೆ ಇದು ಹಾಸನ ಅಥವಾ ಮಂಡ್ಯದ ಕೆಲವು ಕ್ಷೇತ್ರಗಳಂತೆ ಒಕ್ಕಲಿಗರಿಂದ ತುಂಬಿರುವ ಕ್ಷೇತ್ರವಲ್ಲ, ಹೀಗಾಗಿ ಶಿವಲಿಂಗೇಗೌಡರು ಮತ್ತೊಮ್ಮೆ ಆಯ್ಕೆಯಾಗುವುದು ಕಷ್ಟವೇನಲ್ಲ ಎಂದು ಗುಬ್ಬಿ ಮಾಜಿ ಶಾಸಕ ಎಸ್ ಆರ್ ಶ್ರೀನಿವಾಸ್ ಹೇಳಿದ್ದಾರೆ.

ಶಾಸಕ ಎಸ್ ಆರ್ ಶ್ರೀನಿವಾಸ್ ಜೆಡಿಎಸ್ ತೊರೆಯುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಲಿಂಗೇಗೌಡ, ಶ್ರೀನಿವಾಸ್ ತಮ್ಮ ಕ್ಷೇತ್ರದಿಂದ ತಮ್ಮ ಬೆಂಬಲಿಗರೊಬ್ಬರಿಗೆ ಪಕ್ಷದಿಂದ ಎಂಎಲ್‌ಸಿ ಸ್ಥಾನ ಕೇಳಿದರು, ಆದರೆ ಪಕ್ಷ ಅದನ್ನು ನಿರಾಕರಿಸಿತು. ಹೀಗಾಗಿ ಅವರ ಬೆಂಬಲಿಗರು ಜೆಡಿಎಸ್‌ನಿಂದ ಹೊರಬರುವಂತೆ ಸ್ಪಷ್ಟವಾಗಿ ಒತ್ತಾಯಿಸಿದರು, ಹೀಗಾಗಿ ಅವರು  ತಮ್ಮ ಬೆಂಬಲಿಗರ ಸೂಚನೆ  ಅನುಸರಿಸುತ್ತಿದ್ದಾರೆ ಎಂದು ಹೇಳಿದರು.

SCROLL FOR NEXT