ರಾಜಕೀಯ

ಧ್ರುವನಾರಾಯಣ್ ನಿಧನದ ನಂತರ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಬಿ.ಎನ್. ಚಂದ್ರಪ್ಪ ನೇಮಕ

Nagaraja AB

ಬೆಂಗಳೂರು: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪರಿಶಿಷ್ಟ ಎಡ ಸಮುದಾಯದ ಒಲೈಸುವ ನಿಟ್ಟಿನಲ್ಲಿ ಚಿತ್ರದುರ್ಗದ ಮಾಜಿ ಲೋಕಸಭಾ ಸದಸ್ಯ ಬಿಎನ್ ಚಂದ್ರಪ್ಪ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕಾಂಗ್ರೆಸ್ ನೇಮಕ ಮಾಡಿದೆ.

ಕೆಪಿಸಿಸಿಯಲ್ಲಿ ಎಡ ಸಮುದಾಯದ ದಲಿತ ಮುಖಂಡರು ಇಲ್ಲದಿರುವುದನ್ನು ಪರಿಗಣಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಕ್ರಮ ಕೈಗೊಂಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್, ಧ್ರುವ ನಾರಾಯಣ್ ನಿಧನದ ನಂತರ ಕೂಡಲೇ ಜಾರಿಗೆ ಬರುವಂತೆ ಚಂದ್ರಪ್ಪ ನೇಮಕದ ನಿರ್ಧಾರ ಕೈಗೊಳ್ಳಲಾಗಿದೆ.

ವಾಸ್ತವವಾಗಿ ಚಂದ್ರಪ್ಪ ಕೂಡಾ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪಾವಗಡದಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಬಯಸಿದ್ದಾರೆ. ಇವರು 2014 -2019ರವರೆಗೂ ಲೋಕಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಸಂಸತ್ತಿನ ರಾಸಾಯನಿಕ ಮತ್ತು ರಸಗೊಬ್ಬರದ ಸ್ಥಾಯಿ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮೂಲತ: ಚಿಕ್ಕಮಗಳೂರು ಜಿಲ್ಲೆಯವರಾದ ಚಂದ್ರಪ್ಪ ಎಂಬತ್ತರ ದಶಕದಲ್ಲಿ ಹಿಂದಿನ ಜಿಲ್ಲಾ ಪರಿಷತ್ತಿಗೆ ಆಯ್ಕೆಯಾಗಿದ್ದರು. ಮಲ್ಲಿಕಾರ್ಜುನ ಖರ್ಗೆಯವರಂತೆ ಚಂದ್ರಪ್ಪ ಕೂಡ ರಾಜ್ಯದ ಚರ್ಮೋದ್ಯಮದ ಅಂಗಸಂಸ್ಥೆಯಾದ ಲಿಡ್ಕರ್‌ನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.

SCROLL FOR NEXT