ರಾಜಕೀಯ

ಅಭ್ಯರ್ಥಿಗಳ ಮೂರನೇ ಪಟ್ಟಿಗೆ ಮುನ್ನ ಬಂಡಾಯ: ಕೈ ಪಾಳೆಯದಲ್ಲಿ ಟಿಕೆಟ್ ವಂಚಿತರ ಅಸಮಾಧಾನ ಭುಗಿಲೇಳುವ ಸಾಧ್ಯತೆ

Sumana Upadhyaya

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಬೆರಳೆಣಿಕೆ ದಿನಗಳು ಬಾಕಿ ಇರುವುದು. ಈಗಾಗಲೇ ಕೈ ಪಕ್ಷವಾದ ಕಾಂಗ್ರೆಸ್ ನಲ್ಲಿ ಎರಡು ಪಟ್ಟಿ ಬಿಡುಗಡೆಯಾದ ನಂತರ ಬಂಡಾಯ ಸ್ವಲ್ಪ ಮಟ್ಟಿಗೆ ಕಂಡುಬರುತ್ತಿದೆ. ಮೂರನೇ ಪಟ್ಟಿ ಬಿಡುಗಡೆಗಾಗಿ ಕಾಯುತ್ತಿರುವ ಆಕಾಂಕ್ಷಿಗಳು ಈಗಾಗಲೇ ತಮ್ಮ ಅಸಮಾಧಾನ, ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ. ಟಿಕೆಟ್ ಕೈ ತಪ್ಪಬಹುದು ಎಂದು ತಿಳಿದವರು ಪಕ್ಷದ ನಾಯಕತ್ವದ ವಿರುದ್ಧ ಹರಿಹಾಯ್ದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ತೇರದಾಳದಿಂದ ಸಮುದಾಯದ ಮುಖಂಡ ಡಾ.ಮಲ್ಲೇಶಪ್ಪ ಎಸ್.ದಡ್ಡೇನವರ ಅವರಿಗೆ ಟಿಕೆಟ್ ನೀಡಬೇಕು ಎಂದು ಕರ್ನಾಟಕ ರಾಜ್ಯ ಹಟಗಾರ ಲಿಂಗಾಯತ ಪೀಠದ ಸದಸ್ಯರು ಹಾಗೂ ಅವರ ಧಾರ್ಮಿಕ ಮುಖಂಡರು ಒತ್ತಾಯಿಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿಷ್ಠಾವಂತೆ ಮಾಜಿ ಸಚಿವೆ ಉಮಾಶ್ರೀ ಅವರಿಗೆ ಟಿಕೆಟ್ ನೀಡುವುದನ್ನು ವಿರೋಧಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಪ್ರಾತಿನಿಧ್ಯದೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬಲಿಜ ಸಮುದಾಯದ ಹಿರಿಯ ಮುಖಂಡ ಆರ್.ವಿ.ದೇವರಾಜ್ ಅವರಿಗೆ ಶಿವಕುಮಾರ್, ಬಿಬಿಎಂಪಿ ಮಾಜಿ ಮೇಯರ್ ಗಂಗಾಂಭಿಕೆ ಬೆಂಬಲಕ್ಕೆ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹಾಗೂ ಪಕ್ಷದಿಂದ ಅಮಾನತುಗೊಂಡಿರುವ ಕೆಜಿಎಫ್ ಬಾಬು ಅವರ ಬೆಂಬಲಕ್ಕೆ ಚಿಕ್ಕಪೇಟೆ ಕ್ಷೇತ್ರವೂ ಬಂಡಾಯ ಸಾರುವ ಸಾಧ್ಯತೆ ಇದೆ.

ಸಮೀಕ್ಷೆಯೊಂದೇ ಆಧಾರವಲ್ಲ, ಡಿ ಕೆ ಶಿವಕುಮಾರ್: ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಕುರಿತು ಕೇಳಿದ ಪ್ರಶ್ನೆಗೆ, ಬಂಡಾಯ ಶಮನದ ಜವಾಬ್ದಾರಿಯನ್ನು ಪಕ್ಷದ ಹೈಕಮಾಂಡ್‌ಗೆ ನೀಡುವುದಿಲ್ಲ, ಸ್ವತಃ ನಾವೇ ನಿಭಾಯಿಸುತ್ತೇವೆ. ಪಕ್ಷ ಅಧಿಕಾರಕ್ಕೆ ಬಂದರೆ ಟಿಕೆಟ್ ಸಿಗದವರಿಗೆ ಮಂಡಳಿ, ನಿಗಮಗಳಲ್ಲಿ ಹುದ್ದೆ ನೀಡಲಾಗುವುದು ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. 

ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಗೆಲುವಿನ ಮಾನದಂಡವನ್ನು ಮಾತ್ರ ನೋಡಲಾಗುತ್ತದೆ. ಕೆಪಿಸಿಸಿ ಮತ್ತು ಎಐಸಿಸಿ ಆಂತರಿಕ ಸಮೀಕ್ಷೆಗಳು ಏಕೈಕ ಮಾನದಂಡವಲ್ಲ ಎಂದು ಅವರು ಪ್ರತಿಪಾದಿಸಿದರು. ಎಸ್‌ಸಿಗಳ ಉಪಪಂಗಡಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಅವಕಾಶ ಕಲ್ಪಿಸುವುದರೊಂದಿಗೆ ಸಾಮಾಜಿಕ ನ್ಯಾಯವೂ ಕಾರ್ಯರೂಪಕ್ಕೆ ತರಬೇಕು. ಲಿಂಗಾಯತರಿಗೂ ಈ ಬಾರಿ ಹೆಚ್ಚು ಟಿಕೆಟ್ ಸಿಗಲಿದೆ ಎಂದರು.

"ರಾಜಕೀಯದಲ್ಲಿ ಇದು ಸಹಜ. ಸಹಕಾರದಿಂದ ಅಧಿಕಾರ ಹಂಚಿಕೆಯಾಗಬೇಕಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಧಿಕಾರ ಹಂಚಿಕೆಯಾಗಲಿದೆ. ಎಲ್ಲರೂ ಸಮಾಧಾನದಿಂದಿರಬೇಕು ಎಂದು ಕೇಳುತ್ತಿದ್ದೇವೆ. ನಮ್ಮಲ್ಲಿ ಪಟ್ಟಿ ಬಿಡುಗಡೆ ನಂತರ ಅಲ್ಲಲ್ಲಿ ಕೆಲವೊಬ್ಬರು ಮಾತ್ರ ಅಸಮಾಧಾನ ಹೊಂದಿದ್ದಾರೆ. ಆದರೆ ಬಿಜೆಪಿಯಲ್ಲಿ ಪಟ್ಟಿ ಬಿಡುಗಡೆಗೂ ಮುನ್ನವೇ ಭಿನ್ನಾಭಿಪ್ರಾಯಗಳಿವೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.

SCROLL FOR NEXT