ರಾಜಕೀಯ

ಗುಬ್ಬಿ ಕ್ಷೇತ್ರದಿಂದ ಅರುಣ್ ಗೆ ಟಿಕೆಟ್ ಕೇಳಿರುವುದು ನಿಜ; ಎಂಟಿಬಿ - ಕಾರಜೋಳ ಸಹ ಪುತ್ರರಿಗೆ ಟಿಕೆಟ್ ಬೇಡಿಕೆ: ಸೋಮಣ್ಣ

Shilpa D

ತುಮಕೂರು: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವ ವಿ.ಸೋಮಣ್ಣ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ನಮಿಸಿ, ವಿಶೇಷ ಪೂಜೆ ಸಲ್ಲಿಸಿದರು. ಸಚಿವರ ಜೊತೆ ಸಂಸದ ಜಿ.ಎಸ್.ಬಸವರಾಜು, ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧ್ಯಕ್ಷ ರವಿಶಂಕರ್ ಸೇರಿದಂತೆ ಹಲವು ಬಿಜೆಪಿ ನಾಯಕರಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಶಿವಕುಮಾರ ಮಹಾಸ್ವಾಮಿಗಳು ರಾಷ್ಟ್ರ ಕಂಡ ಮಹಾ ತಪಸ್ವಿಗಳು. ಅನ್ನದಾತರು, ವಿದ್ಯಾ ದಾನಿಗಳು. ನಮಗೂ ಪೂಜ್ಯರಿಗೂ ಅವಿನಾಭಾವ ಸಂಬಂಧ ಇತ್ತು. ನಾವು ಯಾವುದೇ ಶುಭ ಕಾರ್ಯ ನಡೆಸಬೇಕೆಂದರೂ ಮೊದಲು ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಅಶೀರ್ವಾದ ಪಡೆಯುತ್ತೇವೆ.

ಏಪ್ರಿಲ್ 1ಕ್ಕೆ ಮಠಕ್ಕೆ ಬೇಟಿ ನೀಡಬೇಕಿತ್ತು. ಚುನಾವಣಾ ನಿಂತಿ ಸಹಿತೆ ಜಾರಿ ಇದ್ದ ಕಾರಣ ಬರಲು ಆಗಿರಲಿಲ್ಲ. ಚುಂಚನಗಿರಿ ಹಾಗೂ ಸಿದ್ದಗಂಗಾ ಮಠದ ಶ್ರೀಗಳಿಬ್ಬರು ನನಗೆ ಆರಾಧ್ಯ ದೈವ" ಎಂದು ಹೇಳಿದರು.

ಚಾಮರಾಜನಗರದ ಯಾವುದಾದರೂ ಕ್ಷೇತ್ರದಿಂದ ವಸತಿ ಸಚಿವ ವಿ.ಸೋಮಣ್ಣ ಹಾಗೂ ಅವರ ಪುತ್ರ ಡಾ.ಅರುಣ್ ಸೋಮಣ್ಣ ಅವರನ್ನು ಗುಬ್ಬಿಯಿಂದ ಕಣಕ್ಕಿಳಿಸಲು ಭಾರತೀಯ ಜನತಾ ಪಕ್ಷದ ಹೈಕಮಾಂಡ್ ರಣತಂತ್ರ ರೂಪಿಸಿದೆ ಎನ್ನಲಾಗಿದೆ.

ಸೋಮಣ್ಣ ಅವರು ಶಾಸಕರಾಗಿ ಪ್ರತಿನಿಧಿಸುವ ಬೆಂಗಳೂರಿನ ಗೋವಿಂದರಾಜನಗರದಿಂದ ಸ್ಪರ್ಧಿಸಲು ಬಯಸಿದ್ದು,  ಈ ಸಂಬಂಧ ಶ್ರೀಗಳೊಂದಿಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ತಮ್ಮ ಮಗನಿಗೆ ಗುಬ್ಬಿಯಿಂದ ಬಿಜೆಪಿ ಟಿಕೆಟ್ ಕೇಳಿರುವುದನ್ನು ಸಚಿವರು ಒಪ್ಪಿಕೊಂಡಿದ್ದಾರೆ.

ಗೋವಿಂದ್ ಕಾರಜೋಳ ಮತ್ತು ಎಂಟಿಬಿ ನಾಗರಾಜ್ ಕೂಡ ತಮ್ಮ ಪುತ್ರರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿರುವುದರಿಂದ ನನಗೆ ಮತ್ತು ನನ್ನ ಮಗನಿಗೆ ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಅವರು ಹೇಳಿದರು. ಮೈಸೂರಿನ ವರುಣಾದಿಂದ ಕಣಕ್ಕಿಳಿಸುವ ಹೈಕಮಾಂಡ್ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ  ಸೋಮಣ್ಣ ಅದೊಂದು ವದಂತಿ ಎಂದು ಹೇಳಿದ್ದಾರೆ.

SCROLL FOR NEXT