ರಾಜಕೀಯ

ವಿಧಾನಸಭೆ ಚುನಾವಣೆ: ಮೊದಲ ದಿನ 221 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

Sumana Upadhyaya

ಬೆಂಗಳೂರು: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ನಿನ್ನೆ ಗುರುವಾರದಿಂದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ನಿನ್ನೆ 221 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 

ನಾಮಪತ್ರ ಸಲ್ಲಿಸಿದವರಲ್ಲಿ ಪ್ರಮುಖರಾದ ಚಿಕ್ಕಬಳ್ಳಾಪುರದಿಂದ ಆರೋಗ್ಯ ಸಚಿವ ಕೆ.ಸುಧಾಕರ್, ಬಿಳಗಿಯಿಂದ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ನರಗುಂದದಿಂದ ಸಚಿವರಾದ ಸಿ.ಸಿ.ಪಾಟೀಲ್, ಕಾರ್ಕಳದಿಂದ ಸುನೀಲ್ ಕುಮಾರ್, ದಾವಣಗೆರೆ ಉತ್ತರದಿಂದ ಎಸ್.ಎಸ್.ಮಲ್ಲಿಕಾರ್ಜುನ (ಕಾಂಗ್ರೆಸ್), ಅಫಜಲಪುರದಿಂದ ಮಾಲೀಕಯ್ಯ ಗುತ್ತೇದಾರ್ (ಬಿಜೆಪಿ) ನಾಮಪತ್ರ ಸಲ್ಲಿಸಿದ್ದಾರೆ. ಕೆಜಿಎಫ್ ನಿಂದ ರೂಪಕಲಾ ಎಂ, ಹಾವೇರಿಯಿಂದ ರುದ್ರಪ್ಪ ಲಮಾಣಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 

ಮೊದಲ ದಿನ ನಾಮಪತ್ರ ಸಲ್ಲಿಸಿದ 221 ಮಂದಿ ಪೈಕಿ 197 ಮಂದಿ ಪುರುಷರು ಮತ್ತು 24 ಮಹಿಳಾ ಅಭ್ಯರ್ಥಿಗಳು -- ಬಿಜೆಪಿಯಿಂದ 27, ಕಾಂಗ್ರೆಸ್‌ನಿಂದ 26, ಜೆಡಿಎಸ್‌ನಿಂದ 12, ಎಎಪಿಯಿಂದ 10, ಬಿಎಸ್‌ಪಿಯಿಂದ ಒಬ್ಬರು ಮತ್ತು 45 ಸ್ವತಂತ್ರ ಅಭ್ಯರ್ಥಿಗಳು ಇದ್ದಾರೆ. ಇದಲ್ಲದೇ, 100 ಮಾನ್ಯತೆ ಪಡೆಯದ ಪಕ್ಷದ ಅಭ್ಯರ್ಥಿಗಳು ಸಹ ತಮ್ಮ ನಾಮ ಪತ್ರಗಳನ್ನು ಸಲ್ಲಿಸಿದ್ದಾರೆ.

ಇಂದು ಏಪ್ರಿಲ್ 14 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮಜಯಂತಿ ಹಿನ್ನೆಲೆಯಲ್ಲಿ ರಜೆಯಿದ್ದು, ನಾಡಿದ್ದು ಭಾನುವಾರ ರಜೆ ಇರುವುದರಿಂದ ಯಾವುದೇ ನಾಮಪತ್ರ ಸಲ್ಲಿಕೆಗೆ ಅವಕಾಶವಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಸೇರಿದಂತೆ ಐವರಿಗೆ ಮಾತ್ರ ಚುನಾವಣಾ ಕಚೇರಿಯೊಳಗೆ ಹೋಗಲು ಅವಕಾಶ ನೀಡಲಾಗಿದೆ.

ಚುನಾವಣಾ ಆಯೋಗದ ಕಚೇರಿಯ 100 ಮೀಟರ್ ಒಳಗೆ ಯಾವುದೇ ವಾಹನವನ್ನು ಬಿಡುವುದಿಲ್ಲ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 20. ಅಭ್ಯರ್ಥಿಗಳು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕಾಗುತ್ತದೆ. ಪರಿಶೀಲನೆಯು ಏಪ್ರಿಲ್ 21 ರಂದು ಪ್ರಾರಂಭವಾಗಿ ಏಪ್ರಿಲ್ 24 ರಂದು ಮುಕ್ತಾಯಗೊಳ್ಳಲಿದೆ.

ತಮ್ಮ ದಾಖಲೆಗಳನ್ನು ಸಲ್ಲಿಸುವ ಮೊದಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ತಮ್ಮ ತಂದೆ ಕೇಶವ ರೆಡ್ಡಿ, ಪತ್ನಿ ಪ್ರೀತಿ ಮತ್ತು ಕುಟುಂಬದ ನಿಕಟವರ್ತಿಗಳೊಂದಿಗೆ ಚೆನ್ನಕೇಶವ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. 

SCROLL FOR NEXT