ರಾಜಕೀಯ

ನನಗೆ ಬಿಜೆಪಿಯಲ್ಲಿ ಟಿಕೆಟ್ ತಪ್ಪಲು ಬಿ ಎಲ್ ಸಂತೋಷ್ ಕಾರಣ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

Sumana Upadhyaya

ಹುಬ್ಬಳ್ಳಿ: ಬಿಜೆಪಿಯಲ್ಲಿ ಈ ಬಾರಿ ನನಗೆ ಟಿಕೆಟ್ ಕೈತಪ್ಪಲು ಬಿ ಎಲ್ ಸಂತೋಷ್ ಕಾರಣ ಎಂದು ನೇರ ಗಂಭೀರ ಆರೋಪ ಮಾಡಿದ್ದಾರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್. 

ಹಲವಾರು ದಿನಗಳಿಂದ ನಾನು ವೇದನೆ ಅನುಭವಿಸಿದ್ದೇನೆ. ಇದಕ್ಕೆ ಕೇವಲ ಟಿಕೆಟ್ ಕಾರಣ ಅಲ್ಲ. ಟಿಕೆಟ್ ತಪ್ಪೋಕೆ ಕಾರಣ ಆದವರ ಹೆಸರು ಹೇಳೋ ಸಮಯ ಇವತ್ತು ಬಂದಿದೆ. ನಾನು ಈ ಹಿಂದೆ ಸಮಯ ಬಂದಾಗ ಹೇಳುತ್ತೇನೆ ಅಂದಿದ್ದೆ‌, ಇಂದು ಅವರ ಹೆಸರನ್ನು ಬಹಿರಂಗಪಡಿಸುತ್ತಿದ್ದೇನೆ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ (B L Santosh) ಅವರಿಂದಾಗಿ ನನಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಕೈತಪ್ಪಿ ಹೋಯಿತು, ಇವರ ಜೊತೆ ಹಲವು ಜನರು ಇರಬಹುದು ಎಂದು ಆರೋಪ ಮಾಡಿದ್ದಾರೆ.

ನಿನ್ನೆ ಸೋಮವಾರ ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಇಂದು ಹುಬ್ಬಳ್ಳಿಯಲ್ಲಿ ತಮ್ಮ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ಕರೆದು ಬಿ ಎಲ್ ಸಂತೋಷ್ ಮತ್ತು ರಾಜ್ಯ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ನನ್ನ ವಿರುದ್ದ ಬಿಎಲ್ ಸಂತೋಷ್ ಅವರು ಹೈಕಮಾಂಡ್ ಬಳಿ ಅಪಪ್ರಚಾರ ಮಾಡಿದರು. ಅವರ ಟೀಂ ಕೂಡ ನನ್ನ ವಿರುದ್ಧ ತಂತ್ರಗಾರಿಕೆ ಮಾಡಿದರು. ಅವರಿಂದಲೇ ನನಗೆ ಟಿಕೆಟ್ ತಪ್ಪಿತ್ತು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ಟಿಕೆಟ್ ಘೋಷಣೆ ಆಗುವವರೆಗೆ ಸುಮ್ಮನಿದ್ದೆ ಎಂದಿದ್ದಾರೆ. 

ರಾಮದಾಸ್ ಟಿಕೆಟ್ ತಪ್ಪಲೂ ಸಂತೋಷ್ ಕಾರಣ: ಕೋರ್​ ಕಮಿಟಿ ಸಭೆಯಲ್ಲಿ ನನ್ನ ಹೆಸರು ಜೊತೆ ಒಟ್ಟು ಮೂವರ ಆಕಾಂಕ್ಷಿಗಳ ಹೆಸರುಗಳನ್ನು ಕಳುಹಿಸಲಾಗಿತ್ತು. ಸ್ಕ್ರೀನಿಂಗ್ ಕಮಿಟಿಯಲ್ಲಿ ನನ್ನ ಹೆಸರಿತ್ತು. ಆದರೆ ಕೊನೆಗೆ ಟಿಕೆಟ್​ ಕೈತಪ್ಪುವುದಕ್ಕೆ ಸಂತೋಷ್ ಕಾರಣ. ಮೈಸೂರಿನಲ್ಲಿ ರಾಮದಾಸ್ ಕ್ಷೇತ್ರಕ್ಕೂ ನಾನು ಹೋಗಿದ್ದೆ. ರಾಮದಾಸ್ ನಿಂತರೆ ಗೆಲ್ಲುತ್ತಾರೆ. ರಾಮದಾಸ್ ಸಂತೋಷ್ ಆಪ್ತ ಅಲ್ಲ. ಶ್ರೀವತ್ಸ ಸಂತೋಷ್ ಅವರ ಆಪ್ತ. ಹಾಗಾಗಿ ರಾಮದಾಸ್​ಗೆ ಟಿಕೆಟ್​ ಕೈತಪ್ಪಿದ್ದು, ಶ್ರೀವತ್ಸಗೆ ಟಿಕೆಟ್ ಸಿಕ್ಕಿದೆ. ರಾಮದಾಸ್ ಬಂಡಾಯ ಎದ್ದರೆ ಗೆಲ್ಲುವುದಕ್ಕೆ ಆಗಲ್ಲ. ಬಿಎಲ್ ಸಂತೋಷ್ ಕೇರಳದಲ್ಲಿ ಇನ್ ಚಾರ್ಜ್ ಮಾಡಿದ್ರು ಒಂದು ಸೀಟ್ ಬರಲಿಲ್ಲ. ತಮಿಳುನಾಡಿನಲ್ಲಿ ಎರಡು ಮೂರು ಸೀಟ್ ಬಂತು. ಇವತ್ತು ಕರ್ನಾಟಕದಲ್ಲಿ ಕಾರಬಾರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದಿದ್ದಾಗ ವರಿಷ್ಠರಿಗೆ ಕೇಳಿದ್ದೆ. ನಿಮಗೆ ಟಿಕೆಟ್​ ಕೊಡಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಹೇಳಿದ್ದರು. ನೀವೇ ಚುನಾವಣೆಗೆ ಆಸಕ್ತಿಯಿಲ್ಲವೆಂದು ಹೇಳಿಬಿಡಿ ಎಂದು ಸಹ ಎಂದು ಹೇಳಿದ್ದರು. ಒಂದು ಪತ್ರ ಕಳುಹಿಸುತ್ತೇವೆ, ಸಹಿ ಮಾಡಿ ಕಳಿಸಿ ಎಂದಿದ್ದರು. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಮಾತು ಕೇಳಿ ಆಘಾತವಾಯ್ತು. ಸೌಹಾರ್ದಯುತವಾಗಿ ಕರೆದು ಮಾತಾಡಿದ್ದರೆ ನಾನು ಒಪ್ಪಿಕೊಳ್ಳುತ್ತಿದ್ದೆ. ಆದರೆ ಬಿಜೆಪಿಯವರು ನನ್ನನ್ನು ನಡೆಸಿಕೊಂಡ ರೀತಿಯಿಂದ ಬೇಸರ ತಂದಿದೆ ಎಂದರು.

ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವ ಅವಕಾಶವಿತ್ತು. ಆದರೆ ಕೆಲವೊಬ್ಬರಿಗೆ ಬಿಜೆಪಿ ಅಧಿಕಾರಕ್ಕೆ ಬರೋದು ಬೇಡ ಅನಿಸುತ್ತಿದೆ. ಬಿಜೆಪಿಯವರೇ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆದಿದ್ದಾರೆ. ಪ್ರಮುಖ ನಾಯಕರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನ ವಿರುದ್ಧ 1 ವರ್ಷದಿಂದ ಷಡ್ಯಂತ್ರ ಮಾಡಿಕೊಂಡು ಬಂದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರಿಂದ ಪ್ಯಾಚ್​ ಅಪ್ ಮಾಡಲಾಗಲ್ಲ ಎಂದು ಶೆಟ್ಟರ್ ಹೇಳಿದ್ದಾರೆ.

ಈ ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಉತ್ತಮ ಆಡಳಿತ ನೀಡಿದ್ದೇನೆ, ಹಲವು ಜನಪರ ಕಾರ್ಯಕ್ರಮಗಳನ್ನು ತಂದಿದ್ದೇನೆ. ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲಮನ್ನಾ ಮಾಡಿದ್ದೆ. ನನಗೆ ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ನನ್ನ ಮೇಲಿಲ್ಲ, ಆಪಾದನೆಗಳಿಲ್ಲ. ಯಡಿಯೂರಪ್ಪ, ಅನಂತ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದೇನೆ. ಈಗ ಯಡಿಯೂರಪ್ಪ ನಂತರ ರಾಜ್ಯದಲ್ಲಿ ಪ್ರಮುಖ ಲಿಂಗಾಯತ ನಾಯಕ ನಾನೇ. ಹೀಗಿರುವಾಗ ನನ್ನನ್ನು ಬಿಜೆಪಿಯಲ್ಲಿ ಈ ಮಟ್ಟಕ್ಕೆ ಕಡೆಗಣಿಸಿದ್ದು ತೀರಾ ನೋವುಂಟು ಮಾಡಿದೆ ಎಂದು ಜಗದೀಶ್ ಶೆಟ್ಟರ್ ಆರೋಪ ಮಾಡಿದ್ದಾರೆ. 

SCROLL FOR NEXT