ಬೆಂಗಳೂರು: ನಾಮಪತ್ರ ಸಲ್ಲಿಕೆಗೆ ಎರಡೇ ದಿನ ಬಾಕಿ ಉಳಿದಿದೆ. ಹೀಗಾಗಿ ಚುನಾವಣಾ ಕಣ ರಂಗೇರುತ್ತಿದ್ದು ಪದ್ಮನಾಭನಗರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.
ಕಾಂಗ್ರೆಸ್ ಈಗಾಗಲೇ ರಘುನಾಥ್ ನಾಯ್ಡು ಅವರಿಗೆ ಫಾರಂ ಬಿ ನೀಡಿದೆ. ಆದರೆ ಈಗ ಬಿ ಫಾರಂಗೆ ತಡೆ ಹಿಡಿಯಲಾಗಿದ್ದು ಹಾಲಿ ಶಾಸಕ ಅಶೋಕ್‌ಗೆ ಠಕ್ಕರ್ ನೀಡಲು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್ ಸ್ಪರ್ಧೆ ಮಾಡುತ್ತಾರಾ ಎನ್ನುವುದು ಸದ್ಯದ ಕುತೂಹಲವಾಗಿದೆ.
ಪದ್ಮನಾಭನಗರದಲ್ಲಿ ಬಿಜೆಪಿಯಿಂದ ಆರ್. ಅಶೋಕ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಬಿ ಫಾರಂ ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ರಘುನಾಥ ನಾಯ್ಡು ಇನ್ನೂ ಕಾದುನೋಡುವ ತಂತ್ರದ ಅನುಸರಿಸಿದ್ದಾರೆ. ಜೆಡಿಎಸ್ ಇನ್ನೂ ಅಭ್ಯರ್ಥಿಯನ್ನೇ ಪ್ರಕಟಿಸಿಲ್ಲ. ಈ ನಡುವೆ ರಘುನಾಥ ನಾಯ್ಡು ಅವರಿಂದ ಬಿ ಫಾರಂ ವಾಪಸ್ ಪಡೆದಿದ್ದಾರೆ ಎನ್ನುವ ಗುಸು ಗುಸು ಆರಂಭವಾಗಿದೆ.
ಇದನ್ನೂ ಓದಿ: ಅಲುಗಾಡುತ್ತಿದೆ ಬಿಜೆಪಿ ಲಿಂಗಾಯತ ಮೂಲ: ಸಂತೋಷ್ ಕು'ತಂತ್ರ'ಕ್ಕೆ ಕೇಸರಿ ಪಡೆ ವಿಲವಿಲ; ಶೆಟ್ಟರ್ ಸೇರ್ಪಡೆಯಿಂದ 'ಕೈ'ಗೆ ಆನೆ ಬಲ!
ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ರಘುನಾಥ ನಾಯ್ಡು, ಬಿ ಪಾರಂ ನನ್ನ ಬಳಿಯೇ ಇದೆ, ಡಿ.ಕೆ ಸುರೇಶ್ ಕಣಕ್ಕಿಳಿದರೆ ಸಂತೋಷದಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ಈ ಸಂಬಂಧ ಪ್ರತಿಕ್ರಿಯೆ ನೀಡಿದ ಡಿ.ಕೆ ಸುರೇಶ್ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದಾರೆ.