ರಾಜಕೀಯ

ಮುಳಬಾಗಿಲು ಅಭ್ಯರ್ಥಿ ಬದಲಿಸದಿದ್ದರೆ ಕೋಲಾರದಿಂದ ನಾಮಪತ್ರ ಸಲ್ಲಿಸಲ್ಲ: ಕೊತ್ತೂರು ಮಂಜುನಾಥ್ ಪಟ್ಟು; ಕಾಂಗ್ರೆಸ್ ಕ್ಯಾಂಡಿಡೇಟ್ ಚೇಂಜ್

Shilpa D

ಬೆಂಗಳೂರು: ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ತನ್ನ ಅಭ್ಯರ್ಥಿಯನ್ನು ಬದಲಿಸಿ ಅಚ್ಚರಿ ಮೂಡಿಸಿದ್ದ ಕಾಂಗ್ರೆಸ್ ಪಕ್ಷ ಕೋಲಾರದ ಅಭ್ಯರ್ಥಿ ಕೊತ್ತೂರು ಜಿ ಮಂಜುನಾಥ್ ಒತ್ತಡಕ್ಕೆ ಮಣಿದು ಗುರುವಾರ ಮುಳಬಾಗಲು (ಎಸ್‌ಸಿ) ಅಭ್ಯರ್ಥಿಯನ್ನು ಬದಲಾಯಿಸಿದೆ.

ಮಾಜಿ ಶಾಸಕ ಹಾಗೂ ಕೋಲಾರ ಕಾಂಗ್ರೆಸ್‌ ಅಭ್ಯರ್ಥಿ ಕೊತ್ತೂರು ಮಂಜುನಾಥ್ ಒತ್ತಡಕ್ಕೆ ಮಣಿದ ಕಾಂಗ್ರೆಸ್‌ ಹೈಕಮಾಂಡ್ ಮುಳಬಾಗಿಲು ಮೀಸಲು ಕ್ಷೇತ್ರದ ಟಿಕೆಟ್‌ ಪ್ರಕಟಿಸಿದ 12 ಗಂಟೆಯೊಳಗೆ ಅಭ್ಯರ್ಥಿಯನ್ನು ದಿಢೀರ್‌ ಬದಲಾಯಿಸಿದೆ. ಬುಧವಾರ ರಾತ್ರಿ ಎಐಸಿಸಿ ಪ್ರಕಟಿಸಿದ ಐದನೇ ಪಟ್ಟಿಯಲ್ಲಿ ಡಾ.ಬಿ.ಸಿ. ಮುದ್ದು ಗಂಗಾಧರ್ ಎಂಬುವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಲಾಗಿತ್ತು. ‘ಬಿ’ ಫಾರಂ ಕೂಡ ನೀಡಲಾಗಿತ್ತು.

ಇದರಿಂದ ಕೋಪಗೊಂಡ ಕೊತ್ತೂರು ಮಂಜುನಾಥ್, ‘ಮುದ್ದು ಗಂಗಾಧರ್ ಯಾರು ಎಂಬುವುದೇ ಕ್ಷೇತ್ರದ ಜನರಿಗೆ ಗೊತ್ತಿಲ್ಲ. ಅಭ್ಯರ್ಥಿ ಬದಲಾಯಿಸದಿದ್ದರೆ ಕೋಲಾರದಲ್ಲಿ ನಾಮಪತ್ರ ಸಲ್ಲಿಸುವುದಿಲ್ಲ’ ಎಂದು ಪಟ್ಟು ಹಿಡಿದಿದ್ದರು. ಇದರ ಜೊತೆಗೆ ಮುಳಬಾಗಿಲು ಕ್ಷೇತ್ರದಲ್ಲೂ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರಿಂದಲೂ ಡಾ.ಮುದ್ದು ಗಂಗಾಧರ್ ಅಭ್ಯರ್ಥಿಯಾಗುವುದಕ್ಕೆ ಭಾರಿ ವಿರೋಧ ವ್ಯಕ್ತವಾಯಿತು.

ಹೀಗಾಗಿ, ಡಾ.ಮುದ್ದು ಗಂಗಾಧರ್ ಬದಲಿಗೆ ಬೋವಿ ಸಮುದಾಯದ ಆದಿನಾರಾಯಣ ಎಂಬುವರಿಗೆ ಮುಳಬಾಗಿಲು ಟಿಕೆಟ್ ಘೋಷಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ‘ಬಿ’ ಫಾರಂ ನೀಡಿದರು. ಬಾಗೇಪಲ್ಲಿಯ ಆದಿನಾರಾಯಣ ಬೆಂಗಳೂರಿನಲ್ಲಿ ನೆಲೆಸಿದ್ದು, ಕೊತ್ತೂರು ಮಂಜುನಾಥ ಅವರ ಆಪ್ತರಾಗಿದ್ದಾರೆ.

ಗುರುವಾರ ಕೋಲಾರದಲ್ಲಿ ನಾಮಪತ್ರ ಸಲ್ಲಿಸಿದ ಕೊತ್ತೂರು, ತಕ್ಷಣವೇ ಮುಳಬಾಗಿಲಿಗೆ ತೆರಳಿ ಆದಿನಾರಾಯಣ ನಾಮಪತ್ರ ಸಲ್ಲಿಕೆಗೆ ಸಹಕರಿಸಿದರು. ಇದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಹಿನ್ನಡೆಯಾಗಿದ್ದು, ಮಾಜಿ ಯುವ ಕಾಂಗ್ರೆಸ್ ಮುಖಂಡ ಡಾ.ಮುದ್ದುಗಂಗಾಧರ್, ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರ ಆಪ್ತರೂ ಆಗಿದ್ದರು.

ಡಾ.ಮುದ್ದುಗಂಗಾಧರ್ ಅವರಿಗೆ ರಾಜಕೀಯ ಅನುಭವವಿಲ್ಲ, ಕೊತ್ತೂರು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಮತ್ತು ಇದು ಈ ಅವ್ಯವಸ್ಥೆಗೆ ಕಾರಣವಾಯಿತು" ಎಂದು  ಕಾಂಗ್ರೆಸ್ ನಾಯಕರೊಬ್ಬರು ಹೇಳಿದರು.

SCROLL FOR NEXT