ರಾಜಕೀಯ

ಸಿದ್ದರಾಮಯ್ಯ ಮಾನಸಿಕ ರೋಗಿ; ದಡ್ಡ, ಬಾಯಿಗೆ ಬಂದಂತೆ ಮಾತನಾಡುತ್ತಾನೆ: ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ

Manjula VN

ಮೈಸೂರು: ವರುಣಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆವರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಂತೆಯೇ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಏಕವಚನದಲ್ಲೇ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರುಣಾ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅದು ಸಾಧ್ಯಾನಾ ಅಷ್ಟು ಮತಗಳ ಅಂತರ ಹೇಗೆ ಸಿಗುತ್ತದೆ? ಒಬ್ಬ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಮಾತನಾಡುವ ಮೊದಲು ಸ್ವಲ್ಪ ಯೋಚನೆ ಮಾಡಿ ಮಾತನಾಡಬೇಕು ಎಂದು ಲೇವಡಿ ಮಾಡಿದರು.

ಕಳೆದ ಚುನಾವಣೆಯ ಅಂಕಿ ಅಂಶ ನೋಡಿದಾಗ ವರುಣಾದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ 8 ಸಾವಿರ ಮತಗಳ ಅಂತರವಿದೆ. ಈ ಬಾರಿ ನಮ್ಮ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ವರುಣ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಯಾರು ಎಷ್ಟು ವೋಟ್ ಸಿಗಲಿದೆ ಎಂದು ಫಲಿತಾಂಶ ಬಂದಾಗ ಗೊತ್ತಾಗಲಿದೆ. ಮೈಸೂರಿನ 11 ಕ್ಷೇತ್ರಗಳಲ್ಲಿ ನಾವು ಈ ಬಾರಿ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಬಲಿಷ್ಠವಾಗಿಲ್ಲ. ಅಲ್ಲಿ ಸಮರ್ಥ ನಾಯಕರಿಲ್ಲ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಾರ್ಟಿ ಒಂದು ಮದ್ದೂರು ಶಟಲ್ ಟ್ರೈನ್ ಆಗಿದೆ, ಮದ್ದೂರು ಶಟಲ್ ಟ್ರೈನ್ ಎಂದರೇ ಏನು ಗೊತ್ತಾ? ಅದು ಬೆಂಗಳೂರು ಬಿಟ್ಟು ಮದ್ದೂರಿಗೆ ಯಾವಾಗ ಸೇರುತ್ತೆ ಎನ್ನುವುದೇ ಗೊತ್ತಾಗಲ್ಲ ಅದೇ ಪರಿಸ್ಥಿಯಲ್ಲಿ ಇಂದು ಕಾಂಗ್ರೆಸ್ ಪಕ್ಷವಿದೆ. ಆದರೂ ಅಧಿಕಾರದ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ನಾಯಕರೇ ಇಲ್ಲ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಸೋತಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕರ್ನಾಟಕಕ್ಕೆ ಬಂದು ಮಾತನಾಡುತ್ತಿದ್ದಾರೆಂದು ವ್ಯಂಗ್ಯವಾಡಿದರು.

ಇದೇ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ರಕ್ತದಲ್ಲಿ ಲಿಖಿತವಾಗಿ ನೀಡುವುದಾಗಿ ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ಧವೂ ಶ್ರೀನಿವಾಸ್ ಪ್ರಸಾದ್ ಅವರು ವಾಗ್ದಾಳಿ ನಡೆಸಿದರು.

ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿ ಇಂತಹ ಮಾತುಗಳನ್ನಾಡುವುದು ಸರಿಯಲ್ಲ. ಡಿಕೆ.ಶಿವಕುಮಾರ್ ಈಗಾಗಲೇ ಇಡಿ ಪ್ರಕರಣವನ್ನು ಎದುರಿಸುತ್ತಿದ್ದು, ಇಂತಹ ವ್ಯಕ್ತಿ ಸಿಎಂ ಆದರೆ, ಯಾವ ರೀತಿಯ ಆಡಳಿತ ನೀಡುತ್ತಾನೆಂದು ಯಾರಿಗೆ ಗೊತ್ತು? ಎಂದು ಪ್ರಶ್ನಿಸಿದರು. ಅಲ್ಲದೆ. ಶನಿವಾರ ಮತ್ತೊಮ್ಮೆ ವರುಣಾದಲ್ಲಿ ಪ್ರಚಾರ ಮಾಡುವುದಾಗಿಯೂ ತಿಳಿಸಿದರು.

SCROLL FOR NEXT