ಮೈಸೂರು: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಸರಣಿ ಪ್ರಚಾರ ಸಮಾವೇಶ, ರೋಡ್ ಶೋಗಳಲ್ಲಿ ಪಾಲ್ಗೊಳ್ಳುವ ಮೂಲಕ ಮತದಾರರನ್ನು ಮನವೊಲಿಸಲು ಕಸರತ್ತು ನಡೆಸುತ್ತಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದ ಪ್ರಧಾನಿ ಮೋದಿ ಇಂದು ಸಾಂಸ್ಕೃತಿಕ ರಾಜಧಾನಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶಿಸಿದರು. ನಗರದ ವಿದ್ಯಾಪೀಠದಿಂದ ತೆರೆದ ವಾಹನದಲ್ಲಿ ಮೋದಿ ರೋಡ್ ಶೋ ನಡೆಸುತ್ತಿದ್ದು, ಭಾರೀ ಜನಸ್ತೋಮವೇ ನೆರೆದಿದೆ. ರಸ್ತೆಯ ಇಕ್ಕೆಲ್ಲಗಳಲ್ಲಿ ಕಿಕ್ಕಿರಿದು ತುಂಬಿದ ಜನರು, ಮೋದಿ ಮೋದಿ ಘೋಷಣೆ ಮೊಳಗಿಸುತ್ತಾ ತೆರೆದ ವಾಹನದ ಮೇಲೆ ಹೂಮಳೆ ಸುರಿದರು.
ಬನ್ನಿಮಂಟಪದ ಎಲ್ ಐಸಿ ಸರ್ಕಲ್ ನಲ್ಲಿ ರೋಡ್ ಶೋ ಅಂತ್ಯವಾಗಬೇಕಿತ್ತು. ಆದರೆ, ಸಮಯದ ಅಭಾವದಿಂದಾಗಿ ಹೈವೇ ಸರ್ಕಲ್ ವರೆಗೂ ಮಾತ್ರ ಮೋದಿ ರೋಡ್ ಶೋ ನಡೆಸುತ್ತಿದ್ದಾರೆ. ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಎಸ್ ಎ ರಾಮದಾಸ್ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತೆರೆದ ವಾಹನದಲ್ಲಿದ್ದು, ಮೋದಿ ಅವರಿಗೆ ಸಾಥ್ ನೀಡಿದರು.