ಬೆಂಗಳೂರು: ಪೊಲೀಸ್ ಇನ್‌ಸ್ಪೆಕ್ಟರ್ ಗಳು ವರ್ಗಾವಣೆ ಆದೇಶ ಹೊರಬೀಳುತ್ತಿದ್ದಂತೆಯೇ ಕೆಲವರು ನಿಯುಕ್ತಿಗೊಂಡ ಸ್ಥಳದಲ್ಲಿ ಅಧಿಕಾರ ಸ್ವೀಕರಿಸುವ ತರಾತುರಿಯಲ್ಲಿದ್ದರು. ಆದರೆ, ಅಧಿಕಾರ ಸ್ವೀಕರಿಸದಂತೆ ತಡೆಯೊಡ್ಡಿರುವುದರಿಂದ ಹಲವು ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ.
ಇನ್ಸ್ ಪೆಕ್ಟರ್ ಗಳಾದ ದೀಪಕ್ ಎಲ್ (ಹೆಣ್ಣೂರು ಪೊಲೀಸ್ ಠಾಣೆ), ಮೋಹನ್ ಎನ್ ಹೆದ್ದಣ್ಣನವರ್ (ಕೆಜಿ ಹಳ್ಳಿ ಸಂಚಾರ), ಸುನೀಲ್ ಎಚ್ ಬಿ (ಕೆಜಿ ಹಳ್ಳಿ), ಶಿವಸ್ವಾಮಿ ಸಿಬಿ (ಬಸವೇಶ್ವರನಗರ), ರವಿಕುಮಾರ್ ಎಚ್ ಕೆ (ಪುಟ್ಟೇನಹಳ್ಳಿ), ಪ್ರವೀಣ್ ಬಾಬು ಜಿ (ಮಹದೇವಪುರ), ಮಂಜುನಾಥ್ ಬಿ ( ಸಿಇಎನ್, ಬಳ್ಳಾರಿ ಜಿಲ್ಲೆ) ಮತ್ತು ಸಚಿನ್ ಕುಮಾರ್ (ಚಿಕ್ಕಮಗಳೂರು ಗ್ರಾಮಾಂತರ) ಅವರ ವರ್ಗಾವಣೆಯನ್ನು ತಡೆ ಹಿಡಿಯಲಾಗಿದೆ.
ಕೆಲವು ಇನ್ಸ್‌ಪೆಕ್ಟರ್‌ಗಳು ಅಧಿಕಾರ ವಹಿಸಿಕೊಂಡಿದ್ದು, ಈಗ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಗೆ ತೆರಳಲು ಸ್ವತಂತ್ರರಾಗಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮೂಲವೊಂದು ತಿಳಿಸಿದೆ. ಸದ್ಯ ನನಗೆ ಮಾಡಿರುವ ಪೊಸ್ಟಿಂಗ್ ನಿಂದ ನಾನು ಸಂತೋಷವಾಗಿದ್ದೇನೆ, ಆದರೆ ಹೊಸ ಪಟ್ಟಿಯು ಪ್ರಮುಖ ಬದಲಾವಣೆಗಳೊಂದಿಗೆ ಬಂದರೆ, ಅದು ಸರ್ಕಾರದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಇನ್‌ಸ್ಪೆಕ್ಟರ್ ಒಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಕಿಚ್ಚು ಹೊತ್ತಿಸಿದ ಇನ್ಸ್ ಪೆಕ್ಟರ್ ಗಳ ವರ್ಗಾವಣೆ : ಸಿದ್ದರಾಮಯ್ಯ ಕ್ಯಾಂಪ್ ಗೆ ಮನ್ನಣೆ; ಡಿಕೆ ಶಿವಕುಮಾರ್ ಪಾಳೆಯದ ಬವಣೆ!
ಪೊಲೀಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ತಮ್ಮ ಶಿಫಾರಸಿಗೆ ಸರ್ಕಾರ ಸ್ಪಂದಿಸಿಲ್ಲ ಎಂಬ ಅಸಮಾಧಾನ ಹಲವು ಶಾಸಕರಲ್ಲಿ ಇತ್ತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಈ ವಿಚಾರ ಪ್ರತಿಧ್ವನಿಸಿತ್ತು. ಗೃಹ ಸಚಿವ ಜಿ. ಪರಮೇಶ್ವರ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರೊಂದಿಗೆ ಭಾನುವಾರ(ಜುಲೈ 30) ರಹಸ್ಯ ಸಭೆ ನಡಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪೊಲೀಸ್ ಅಧಿಕಾರಿಗಳ ವರ್ಗಾವಣೆ ಕುರಿತು ಚರ್ಚಿಸಿದ್ದರು.
ಜುಲೈ 31ರಂದು ನಡೆದ ಡಿವೈಎಸ್ಪಿ ಮತ್ತು ಎಸಿಪಿಗಳ ವರ್ಗಾವಣೆ ಜಾಣ್ಮೆಯಿಂದ ನಡೆದಿದ್ದರಿಂದ ಯಾವುದೇ ಸಮಸ್ಯೆ ಸೃಷ್ಟಿಯಾಗಲಿಲ್ಲ. ಆದರೆ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಸಮಸ್ಯೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ವಿಭಾಗಗಳು ಮತ್ತು ಸ್ಟೇಷನ್ ಗಳಿಗೆ ಕೆಲವು ಪೋಸ್ಟಿಂಗ್ ಮಾಡಲಾಯಿತು, ಇವುಗಳನ್ನು "ಪ್ಲಮ್" ಪೋಸ್ಟಿಂಗ್‌ಗಳೆಂದು ಪರಿಗಣಿಸಲಾಗುತ್ತದೆ. ಕೆಲವು ಅಧಿಕಾರಿಗಳು ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿ ‘ಪ್ಲಮ್’ ಹುದ್ದೆ ಪಡೆಯಲು ನೆರವು ಕೋರಿದ್ದರು ಎನ್ನಲಾಗಿದೆ.