ಬೆಳಗಾವಿ: 2024ರ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿರುವ ಬಿಜೆಪಿ ನಮ್ಮನ್ನು ಗುರಿಯಾಗಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
ಅಥಣಿಯಲ್ಲಿ ಬಸವಣ್ಣ ಅವರ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಅವರು, 2024ರ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿದರು,
ಬಿಜೆಪಿಯವರಿಗೆ ಪ್ರಸ್ತಾಪಿಸಲು ಯಾವುದೇ ವಿಷಯಗಳಿಲ್ಲ, ಹೀಗಾಗಿ ರಾಜ್ಯ ಸರ್ಕಾರ ಮತ್ತು ಸಚಿವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. "ನಮ್ಮ ಗ್ಯಾರಂಟಿ ಯೋಜನೆಗಳು ಯಶಸ್ಸು ಕಂಡ ಹಿನ್ನೆಲೆಯಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆಯೇ ಆರೋಪಗಳನ್ನು ಮಾಡುತ್ತಿದ್ದಾರೆಂದು ತಿಳಿಸಿದರು.
ಇದನ್ನೂ ಓದಿ: ಕಮಿಷನ್ ಹಗರಣಗಳ ಹಿಂದಿರುವ ಭ್ರಷ್ಟರ ಬೆನ್ನು ಬಿದ್ದಿದ್ದೇವೆ; ಉಪ್ಪು ತಿಂದವರು ನೀರು ಕುಡಿಯಬೇಕಲ್ಲವೇ?: ಸಿದ್ದು ಕೌಂಟರ್
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರು ಉಪ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ಇದು ಬಿಜೆಪಿಯವರ ಪಿತೂರಿಯಾಗಿದೆ. ಮೂರು ವರ್ಷ ಅಧಿಕಾರದಲ್ಲಿದ್ದರೂ ಅವರಿಗೆ ಗುತ್ತಿಗೆದಾರರಿಗೆ ಹಣ ಕೊಡಲು ಸಾಧ್ಯವಾಗಲಿಲ್ಲ. ಈಗ ಅದೇ ಗುತ್ತಿಗೆದಾರರೊಂದಿಗೆ ಕೈಜೋಡಿಸಿ ಹೋರಾಟ ಮಾಡಲು ಅವರಿಗೆ ಯಾವ ನೈತಿಕ ಹಕ್ಕಿದೆ? ಎಂದು ಪ್ರಶ್ನಿಸಿದರು.
ಹಿಂದಿನ ಬಿಜೆಪಿ ಆಡಳಿತದಲ್ಲಿ ಅನುಷ್ಠಾನಗೊಂಡ ಬಿಬಿಎಂಪಿ ಕಾಮಗಾರಿಗಳ ತನಿಖೆಗೆ ಸರ್ಕಾರ ನಾಲ್ಕು ತಂಡಗಳನ್ನು ರಚಿಸಿದೆ. ಬಿಜೆಪಿ ಸರ್ಕಾರದ ಶೇ.40ರಷ್ಟು ಕಮಿಷನ್ ಆರೋಪ ಕುರಿತು ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದಲ್ಲಿ ತನಿಖೆಗೂ ಸರ್ಕಾರ ಆದೇಶಿಸಿದೆ. "ತನಿಖೆಗಳು ಪೂರ್ಣಗೊಳ್ಳುವ ಮೊದಲು ಬಾಕಿ ಬಿಲ್ ಹಣವನ್ನು ಬಿಡುಗಡೆ ಮಾಡುವುದು ಸಮಂಜಸವಲ್ಲ. ನ್ಯಾಯಯುತವಾಗಿ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಅನ್ಯಾಯವಾಗಲು ಸರಕಾರ ಅವಕಾಶ ನೀಡುವುದಿಲ್ಲ ಎಂದರು.
ಹಿಂದಿನ ಬಿಜೆಪಿ ಆಡಳಿತದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಅಸ್ತವ್ಯಸ್ತವಾಗಿತ್ತು. ಭ್ರಷ್ಟಾಚಾರ, ಹಣದುಬ್ಬರ ಮತ್ತು ಕೋಮು ರಾಜಕಾರಣಕ್ಕೆ ಅವರೇ (ಬಿಜೆಪಿ) ಕಾರಣ. ಈಗ ಕರ್ನಾಟಕದಲ್ಲಿ 135 ಸೀಟುಗಳನ್ನು ಗೆದ್ದು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಅವರಿಗೆ ಭಯ ಶುರುವಾಗಿದೆ. 2024ರಲ್ಲಿ ರಾಜ್ಯದಲ್ಲಿ ಕನಿಷ್ಠ 20 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ. ನಮ್ಮ ಗ್ಯಾರಂಟಿ ಯೋಜನೆಗಳಿಂದ ಜನ ಸಂತಸಗೊಂಡಿದ್ದಾರೆ. ಹೀಗಾಗಿಯೇ ಈ ಯೋಜನೆಗಳು ಜೆಡಿಎಸ್ ಮತ್ತು ಬಿಜೆಪಿಯ ನಿದ್ದೆಗೆಡಿಸಿದೆ. ಆಗಸ್ಟ್ 27ರಂದು ಬೆಳಗಾವಿಯಲ್ಲಿ ಶೀಘ್ರದಲ್ಲೇ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುವುದು. ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಈಗಾಗಲೇ ಆಹ್ವಾನಿಸಲಾಗಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳು ಹಣಕಾಸಿನ ಚಟುವಟಿಕೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಜಿಡಿಪಿಗೆ ಉತ್ತೇಜನವನ್ನು ನೀಡುತ್ತದೆ. ಯುವನಿಧಿ ಯೋಜನೆ ಡಿಸೆಂಬರ್‌ನಲ್ಲಿ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದರು.