ರಾಜಕೀಯ

ಸೆಪ್ಟೆಂಬರ್ 10 ರಂದು ಬೆಂಗಳೂರಿನಲ್ಲಿ ಜೆಡಿಎಸ್‌ ಸಮಾವೇಶ: ಹೆಚ್.ಡಿ. ದೇವೇಗೌಡ

Manjula VN

ಬೆಂಗಳೂರು: ಸೆ.10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶ ನಡೆಸಲಾಗುವುದು ಎಂದು ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ವರಿಷ್ಠ ಹೆಚ್‌ಡಿ ದೇವೇಗೌಡ ಅವರು ಸೋಮವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ 10ರಂದು ನಗರದ ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ಏರ್ಪಡಿಸಲಾಗಿದೆ. ಸುಮಾರು 20 ಸಾವಿರ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ. ಪಕ್ಷದ ಸಮಾವೇಶಕ್ಕೆ ಎಲ್ಲಾ ಜಿಲ್ಲೆಗಳಿಂದ ಕಾರ್ಯಕರ್ತರು ಬರಬೇಕು, 91 ರ ವಯಸ್ಸಿನಲ್ಲೂ ಕೆಲಸ ಮಾಡುತ್ತಿದ್ದೇನೆ. ಯಾರೂ ನನ್ನನ್ನು ಕೈಬಿಡಬೇಡಿʼ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಇದೇ ವೇಳೆ ನಮ್ಮ ಯಾವ ಶಾಸಕರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಇದೆಲ್ಲಾ ಬರೀ ಊಹಾಪೋಹ ಅಷ್ಟೇ. ಯಾರು ಪಕ್ಷ ಬಿಟ್ಟು ಹೋಗುತ್ತಾರೆ ಎನ್ನುವುದು ಗೊತ್ತಾದರೆ ನಾವು ಸರಿ ಮಾಡಿಕೊಳ್ಳುತ್ತೇವೆ. ಈ ರೀತಿಯ ಊಹಾಪೋಹದ ಸುದ್ದಿ ಮಾಡಬೇಡಿ. ಈ ಪ್ರಾದೇಶಿಕ ಪಕ್ಷ ಉಳಿಯಲು ಬಿಡಿ ಎಂದು ಹೇಳಿದರು.

ನಾನು ಮನೆಯಲ್ಲಿ ಕುಳಿತು ಎಲ್ಲವನ್ನೂ ನೋಡುತ್ತಿದ್ದೇನೆ. ಕುಮಾರಸ್ವಾಮಿ ಅವರ ಪೆನ್‍ಡ್ರೈವ್‍ಕುರಿತ ವಿವಾದವೂ ವಿವಾದ ನೋಡಿದ್ದೇನೆ. ಕುಮಾರಸ್ವಾಮಿ ಅಷ್ಟೊಂದು ಸುಲಭವಾಗಿ ಮಾತನಾಡುವುದಿಲ್ಲ. ತುಂಬಾ ವಿಷಯಗಳಿದ್ದು, ಪೆನ್‍ಡ್ರೈವ್‍ ಬಗ್ಗೆ ಲಘುವಾಗಿ ಮಾತನಾಡುವುದು ಬೇಡ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಬಳಿಕ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆಯೂ ದೇವೇಗೌಡ ಅವರು ಸುಳಿವು ನೀಡಿದರು. ಚುನಾವಣೆಯಲ್ಲಿ ಜೆಡಿಎಸ್ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಚಿವ, ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ರಚಿಸಲಾಗಿದ್ದು, ಸೆ.1ರಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದೇವೆ. ಸಮಿತಿಯು ಪಕ್ಷದ ನಾಯಕತ್ವಕ್ಕೆ ವರದಿ ಸಲ್ಲಿಸಲಿದ್ದು, ನಂತರ ಅಭ್ಯರ್ಥಿಗಳ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಲೋಕಸಭೆ ಚುನಾವಣೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರೇ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದರು.

ಲೋಕಸಭೆ ಕ್ಷೇತ್ರಗಳ ವಿಂಗಡಣೆ ಕುರಿತು ಚರ್ಚೆ ನಡೆಯುತ್ತಿದೆ. ಜಿ.ಟಿ.ದೇವೇಗೌಡ ಅವರ ನೇತೃತ್ವದಲ್ಲಿ ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ನಡೆಸಿದ್ದೇವೆಂದು ಹೇಳಿದರು.

ಇದೇ ವೇಳೆ ಬೆಂಗಳೂರಿನಲ್ಲಿ 38,947 ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿರುವ ಭೂಮಾಫಿಯಾಗಳಿಗೆ ರಾಜ್ಯ ಸರ್ಕಾರ ಒಲವು ತೋರುತ್ತಿದೆ ಎಂದು ಆರೋಪಿಸಿದರು.

ಬಳಿಕ ರಾಮನಗರದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ವೈದ್ಯಕೀಯ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರಿಸುವ ಪ್ರಸ್ತಾವನೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

SCROLL FOR NEXT