ರಾಜಕೀಯ

ಪುತ್ರನಿಗೆ ರಾಜ್ಯಾಧ್ಯಕ್ಷ ಹುದ್ದೆಗಾಗಿ ಹೈಕಮಾಂಡ್‌ಗೆ ಬಿಎಸ್ ಯಡಿಯೂರಪ್ಪ ಬ್ಲಾಕ್‌ಮೇಲ್: ಬಸನಗೌಡ ಪಾಟೀಲ್ ಯತ್ನಾಳ್

Ramyashree GN

ಬೆಂಗಳೂರು: ಕರ್ನಾಟಕ ಬಿಜೆಪಿಯ ಘಟಕದೊಳಗಿನ ಆಂತರಿಕ ಕಚ್ಚಾಟ ತೀವ್ರಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಪುತ್ರ ಬಿವೈ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಮಡಾಲು ಪಕ್ಷದ ಹೈಕಮಾಂಡ್‌ಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.

ಸೋಮವಾರ ರಾತ್ರಿ ಮಾತನಾಡಿದ ಶಾಸಕರು, 'ಹೈಕಮಾಂಡ್‌ಗೆ ಯಾಕೆ ಹೆದರಿಕೆ ಬಂದಿತೋ ಗೊತ್ತಿಲ್ಲ. ಶಿಸ್ತಿನ ಬಗ್ಗೆ ಅವರು ಮಾತನಾಡುತ್ತಾರೆ. ಹಾಗಿದ್ದರೆ, ನಾವು ಗುಲಾಮರೇ?. ನಮಗೆ ಶಕ್ತಿ ಇಲ್ಲವೇ?. ಜನ ಬೆಂಬಲ ನಮಗೂ ಇದೆ' ಎಂದಿದ್ದಾರೆ.

'2024ರ ಲೋಕಸಭೆ ಚುನಾವಣೆಗೆ ಪ್ರಚಾರ ಮಾಡುವುದಿಲ್ಲ ಎಂದು ಕೇಂದ್ರ ನಾಯಕರಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದ ಯಡಿಯೂರಪ್ಪ, ರಾಜ್ಯಾದ್ಯಂತ ಸಂಚರಿಸಿ ಪಕ್ಷದ ಪರ ಪ್ರಚಾರ ಮಾಡುವ ಬದಲು ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗುವುದಾಗಿ ಹೈಕಮಾಂಡ್‌ಗೆ ತಿಳಿಸಿದ್ದಾರೆ' ಎಂದರು.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ವಿ ಸೋಮಣ್ಣ ಅವರನ್ನು ಹರಕೆಯ ಕುರಿಯನ್ನಾಗಿ ಮಾಡಲಾಗಿದೆ ಎಂದು ಶಾಸಕರು ಕಿಡಿಕಾರಿದರು.

'ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಲು ವಿಜಯೇಂದ್ರ ಹಣ ಕಳುಹಿಸಿದ್ದು ಅಚ್ಚರಿಯ ಸಂಗತಿಯಾಗಿದೆ. ಈಗ ವಿಜಯೇಂದ್ರ ಅವರನ್ನೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ತಮ್ಮ ಸೋಲಿಗೆ ವಿಜಯೇಂದ್ರ ಹಣ ನೀಡಿದ ಬಗ್ಗೆ ಸ್ವತಃ ಬೊಮ್ಮಾಯಿ ಅವರೇ ಹೇಳಿದ್ದರು. ತಂದೆ-ಮಗ ಏನೆಲ್ಲಾ ಪಿತೂರಿ ನಡೆಸಿದ್ದಾರೆ ಎಂಬ ಸತ್ಯ ಹೊರಬರಬೇಕು' ಎಂದು ಒತ್ತಾಯಿಸಿದರು.

ಮುಂದುವರಿದು ಮಾತನಾಡಿದ ಯತ್ನಾಳ್, ಶಿಕಾರಿಪುರದಲ್ಲಿ ವಿಜಯೇಂದ್ರ ವಿರುದ್ಧ ಕಾಂಗ್ರೆಸ್‌ನಿಂದ ದುರ್ಬಲ ಅಭ್ಯರ್ಥಿ ಕಣಕ್ಕಿಳಿಸಲಾಗಿತ್ತು. ‘ಪಕ್ಷದ ನಾಯಕ ಸೋಮಣ್ಣ ವಿರುದ್ಧ ಅವರು (ಯಡಿಯೂರಪ್ಪ ಮತ್ತು ವಿಜಯೇಂದ್ರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದರು. ಕನಕಪುರದಲ್ಲಿ, ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಯಡಿಯೂರಪ್ಪ ನಡುವೆ ಒಪ್ಪಂದವಾಗಿತ್ತು' ಎಂದು ದೂರಿದ್ದಾರೆ.

ಈ ಆರೋಪಕ್ಕೆ ಪಕ್ಷದ ಹೈಕಮಾಂಡ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ವಿಜಯೇಂದ್ರ ಅವರು ಯಾವುದೇ ಟೀಕೆಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.

SCROLL FOR NEXT