ರಾಜಕೀಯ

ವೈಜ್ಞಾನಿಕ ಜಾತಿ ಗಣತಿಗೆ ಆಗ್ರಹಿಸಿ ಸಿಎಂಗೆ ವೀರಶೈವ ಲಿಂಗಾಯತ ಮನವಿ: ಸಹಿ ಹಾಕಿರುವ ಸಚಿವ ಎಂಬಿ ಪಾಟೀಲ್ ಹೇಳಿದ್ದು ಹೀಗೆ...

Nagaraja AB

ಬೆಂಗಳೂರು: ಒಂದೇ ಜಾತಿಗೆ ಸೇರಿದ ಉಪಜಾತಿಗಳಿಗೆ ಮೀಸಲು ಸೌಲಭ್ಯ ಸಿಗುವುದಕ್ಕೆ ಸಂಬಂಧಿಸಿದಂತೆ ಗೊಂದಲಗಳಿವೆ. ಇದನ್ನು ಸರಿಪಡಿಸಿ ಎಂದಷ್ಟೇ ಮುಖ್ಯಮಂತ್ರಿಯವರಲ್ಲಿ ಕೇಳಿಕೊಂಡಿದ್ದೇವೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಸೋಮವಾರ ಸ್ಪಷ್ಟಪಡಿಸಿದರು.

ವೈಜ್ಞಾನಿಕ ಜಾತಿಗಣತಿಗಾಗಿ ಆಗ್ರಹಿಸಿ 'ಅಖಿಲ ಭಾರತ ವೀರಶೈವ ಲಿಂಗಾಯತ  ಮಹಾಸಭಾ' ವತಿಯಿಂದ ನೀಡಲಾಗಿರುವ ಮನವಿಗೆ ಸಹಿ ಮಾಡಿರುವವರ ಪೈಕಿ ಒಬ್ಬರಾದ ಸಚಿವ ಎಂ ಬಿ ಪಾಟೀಲರನ್ನು ಸುದ್ದಿಗಾರರು ಈ ಬಗ್ಗೆ ಕೇಳಿದಾಗ ಅವರು ಪ್ರತಿಕ್ರಿಯಿಸಿದರು.

ಇರುವ ಸಮಸ್ಯೆಗಳನ್ನು ಗಮನಕ್ಕೆ ತರುವುದರಲ್ಲಿ ಯಾವುದೇ ತಪ್ಪು ಇಲ್ಲ. ಉದಾಹರಣೆಗೆ, ಲಿಂಗಾಯತರಲ್ಲಿ ಗಾಣಿಗ, ಸಾದರ ಹೀಗೆ 50ಕ್ಕೂ ಹೆಚ್ಚು ಉಪಜಾತಿಗಳು ಇದ್ದು ಅವರಿಗೆ ಲಿಂಗಾಯತ-ಗಾಣಿಗ, ಲಿಂಗಾಯತ- ಸಾದರ ಎಂದು ನಮೂದಿಸಿದ್ದರೆ 2ಎ ಪ್ರವರ್ಗದಡಿ ಮೀಸಲಾತಿ ಸಿಗುವುದಿಲ್ಲ. ಈ ಕಾರಣಕ್ಕೆ ಅವರೆಲ್ಲ ಹಿಂದೂ-ಗಾಣಿಗ ಹಿಂದೂ-ಸಾದರ ಎಂದು ನಮೂದಿಸಿಕೊಳ್ಳುತ್ತಾರೆ. ಇಂತಹ ಸಮಸ್ಯೆಗಳನ್ನು ಸರಿಪಡಿಸಲು ನಾವು ಮುಖ್ಯಮಂತ್ರಿ ಅವರನ್ನು ಕೋರಿದ್ದೇವೆ. ಈ ತೊಂದರೆಗಳ ಬಗ್ಗೆ ಅವರಿಗೂ ಗೊತ್ತಿದೆ ಎಂದು ವಿವರಿಸಿದರು.

ಇಂತಹ ತೊಡಕುಗಳು ಒಕ್ಕಲಿಗ ಜನಾಂಗ ಸೇರಿದಂತೆ ಬೇರೆ ಸಮುದಾಯಗಳಿಗೂ ಇರಬಹುದು. ಇದ್ದರೆ, ಅವನ್ನು ಕೂಡ ಸರಿಪಡಿಸುವುದರಲ್ಲಿ ತಪ್ಪೇನಿಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು.

ಕಾಂಗ್ರೆಸಿನಲ್ಲಿ 'ಒಬ್ಬ ವ್ಯಕ್ತಿ, ಒಂದು ಹುದ್ದೆ' ನೀತಿ ಅನುಸರಿಸುವ ಸಾಧ್ಯತೆ ಬಗ್ಗೆ ಕೇಳಿದಾಗ, ಅದರ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಬೇರೆಯವರಿಗೂ ಅವಕಾಶ ಸಿಗಲಿ ಎಂಬ ಕಾರಣಕ್ಕೆ ವರಿಷ್ಠರು ತೀರ್ಮಾನ ತೆಗೆದುಕೊಂಡಾಗ ಅದಕ್ಕೆ ತಕ್ಕಂತೆ ನಾವು ನಡೆದುಕೊಳ್ಳಬೇಕಾಗುತ್ತದೆ ಎಂದರು.

SCROLL FOR NEXT