ರಾಜಕೀಯ

'ನಾಯಿ ಕಾದಿತ್ತು, ಅನ್ನ ಹಳಸಿತ್ತು'.. 'ಬೇರೆ ದಾರಿಯಿಲ್ಲದೆ ಈಶ್ವರಪ್ಪ ರಾಜೀನಾಮೆ': ಸಿದ್ದರಾಮಯ್ಯ

ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವನ್ನು ಹೆಡೆಮುರಿಕಟ್ಟಿ ಕೂರಿಸುವ ಕಾಲ ಬಂದಿದ್ದು, ಅಂದು ನಾವು ಮಾಡಿದ ಕೆಲಸದಿಂದ ಬೇರೆ ದಾರಿಯಿಲ್ಲದೆ ಈಶ್ವರಪ್ಪ ರಾಜೀನಾಮೆ ನೀಡಿದರು ಎಂದು ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು: ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವನ್ನು ಹೆಡೆಮುರಿಕಟ್ಟಿ ಕೂರಿಸುವ ಕಾಲ ಬಂದಿದ್ದು, ಅಂದು ನಾವು ಮಾಡಿದ ಕೆಲಸದಿಂದ ಬೇರೆ ದಾರಿಯಿಲ್ಲದೆ ಈಶ್ವರಪ್ಪ ರಾಜೀನಾಮೆ ನೀಡಿದರು ಎಂದು ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಟ್ವಿಟರ್ ಮೂಲಕ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರಣಿ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ, 'ರಾಜ್ಯ ಬಿಜೆಪಿ ಸರ್ಕಾರದ ಪಶುಸಂಗೋಪನಾ ಸಚಿವರಾದ ಪ್ರಭು ಚೌಹಾಣ್ ಅವರು ಮೇಕೆ, ದನಗಳು ಎಂದರೆ ಯಾವುದು ಎಂಬುದೇ ಗೊತ್ತಿಲ್ಲದ್ದ ಒಬ್ಬ ಪೆದ್ದ. ಈ ಸಚಿವನಿಗೆ ಕನ್ನಡವೂ ಸೇರಿದಂತೆ ಯಾವ ಭಾಷೆಯೂ ಸರಿಯಾಗಿ ಬರೋದಿಲ್ಲ.

ಇಂತಹವರು ಶಾಸಕನಾಗಲು ನಾಲಾಯಕ್. ಸಚಿವ ಪ್ರಭು ಚೌಹಾಣ್ ಸದನದಲ್ಲಿ ನೀಡಿದ್ದ ಉತ್ತರದಲ್ಲಿ 15 ಲಕ್ಷ ಜಾನುವಾರುಗಳ ಸಂಖ್ಯೆಯಲ್ಲಿ ವ್ಯತ್ಯಾಸ ಇತ್ತು, ಇಷ್ಟು ಜಾನುವಾರುಗಳನ್ನು ನೀನೇ ತಿಂದ್ಯನಪ್ಪಾ ಎಂದು ಕೇಳಿದ್ದೆ. ತಪ್ಪು ಉತ್ತರ ನೀಡಿದ್ದರೂ ಪೆದ್ದ ಎನ್ನುವ ಕಾರಣಕ್ಕೆ ಹಕ್ಕುಚ್ಯುತಿ ಮಂಡಿಸಿರಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಇಂತಹ ಅನರ್ಹರೇ ಸಚಿವರು ಎಂದು ಹೇಳಿದ್ದಾರೆ.

ಪ್ರಭು ಚೌಹಾಣ್ ನಾಲಾಯಕ್ ಸಚಿವ 
ಅಂತೆಯೇ 'ಜನವರಿ 15ರೊಳಗೆ ರಾಜ್ಯದ ಎಲ್ಲಾ ಜಾನುವಾರುಗಳಿಗೆ ಚರ್ಮಗಂಟು ರೋಗಕ್ಕೆ ಲಸಿಕೆ ಹಾಕಿಸುತ್ತೇವೆ ಎಂದು ಸಚಿವ ಪ್ರಭು ಚೌಹಾಣ್ ಹೇಳಿದ್ದರು, ಆದರೆ ಇನ್ನೂ 10 ರಿಂದ 15 ಲಕ್ಷ ಜಾನುವಾರಿಗಳಿಗೆ ಲಸಿಕೆ ಹಾಕಿಲ್ಲ. ಇಂಥಾ ಹಸಿ ಸುಳ್ಳು ಹೇಳೋರು ಶಾಸಕರಾಗಲು ಅನರ್ಹರು. ರಾಜ್ಯ ಬಿಜೆಪಿ ಸರ್ಕಾರ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿದ್ದಲ್ಲ, 113 ಸ್ಥಾನಗಳಲ್ಲಿ ಗೆದ್ದರೆ ಮಾತ್ರ  ಜನಾಶೀರ್ವಾದ ಇದೆ ಎಂದರ್ಥ.  ಬಿಜೆಪಿ 104, ಜೆಡಿಎಸ್‌ 37 ಮತ್ತು ಕಾಂಗ್ರೆಸ್‌ 80 ಸ್ಥಾನಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್‌ ಪಕ್ಷ 38.18% ಮತ, ಬಿಜೆಪಿ 36.42% ಮತಗಳನ್ನು ಪಡೆದಿತ್ತು. ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದೆಂಬ ಕಾರಣಕ್ಕೆ ನಾವು ಜೆಡಿಎಸ್ ಪಕ್ಷಕ್ಕೆ  ಬೆಂಬಲ ನೀಡಿದ್ದೆವು. ಸಮ್ಮಿಶ್ರ ಸರ್ಕಾರವನ್ನು ಕುಮಾರಸ್ವಾಮಿ ಅವರಿಂದ ಉಳಿಸಿಕೊಳ್ಳಲಾಗಲಿಲ್ಲ. ಅವರು ವೆಸ್ಟೆಂಡ್‌ ಹೋಟೆಲ್‌ ನಲ್ಲಿ ಉಳಿದುಕೊಂಡು ಶಾಸಕರು, ಸಚಿವರ ಭೇಟಿಗೆ ಅವಕಾಶ ನೀಡದೆ ನಿರ್ಲಕ್ಷ್ಯ ಮಾಡಿ ಅಧಿಕಾರ ಕಳೆದುಕೊಂಡರು ಎಂದು ಕಿಡಿಕಾರಿದ್ದಾರೆ.

'ನಾಯಿ ಕಾದಿತ್ತು, ಅನ್ನ ಹಳಸಿತ್ತು'
ಅಲ್ಲದೆ, 'ನಾಯಿ ಕಾದಿತ್ತು, ಅನ್ನ ಹಳಸಿತ್ತು ಎಂಬ ಗಾಧೆ ಮಾತಿನಂತೆ ಈ ಸಂದರ್ಭವನ್ನು ಕಾಯುತ್ತಿದ್ದ ಬಿಜೆಪಿ ನಾಯಕರು ಒಬ್ಬೊಬ್ಬ ಶಾಸಕರಿಗೆ 15 ರಿಂದ 20 ಕೋಟಿ ಹಣ ನೀಡಿ ಖರೀದಿಸಿ, ಯಡಿಯೂರಪ್ಪ ಅವರ ನೇತೃತ್ವದಲ್ಲಿ ಆಪರೇಷನ್‌ ಕಮಲದ ಮೂಲಕ ಸರ್ಕಾರ ರಚನೆ ಮಾಡಿದರು. ಅಲ್ಲಮಪ್ರಭು ಅವರು ಹೇಳಿದಂತೆ 'ಕೊಟ್ಟ ಕುದುರೆಯನ್ನು ಏರದವ ವೀರನೂ ಅಲ್ಲ, ಶೂರನೂ ಅಲ್ಲ. ಕುಮಾರಸ್ವಾಮಿಯವರಿಗೆ ಕೊಟ್ಟ ಅಧಿಕಾರವನ್ನು ಉಳಿಸಿಕೊಳ್ಳಲಾಗಲಿಲ್ಲ. ತಮ್ಮ ತಪ್ಪಿಗೆ ಉಳಿದವರನ್ನು ದೂರಿ ಏನು ಫಲ? 2013ರಲ್ಲಿ ನಾವು ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿ, ಅದರ ಜೊತೆಗೆ 30 ಹೊಸ ಕಾರ್ಯಕ್ರಮಗಳನ್ನು ಕೂಡ ಜಾರಿ ಮಾಡಿದ್ದೆವು.

ಇದು ಬಸವಾದಿ ಶರಣರ ಕರ್ಮಭೂಮಿ, ನಾವು ಕೂಡ ಬಸವಾದಿ ಶರಣರ ಹಾಗೆ ನುಡಿದಂತೆ ನಡೆದಿದ್ದೇವೆ. ಬಿಜೆಪಿ 2018ರಲ್ಲಿ 600 ಭರವಸೆಗಳನ್ನು ನೀಡಿ ಅವುಗಳಲ್ಲಿ 50 ರಿಂದ 60 ಭರವಸೆಗಳನ್ನು ಕೂಡ ಈಡೇರಿಸಿಲ್ಲ. ಬೇರೆಯವರ ತಾಕತ್‌, ಧಮ್‌ ಪ್ರಶ್ನೆ ಮಾಡುವ ಬೊಮ್ಮಾಯಿ  ಒಂದೇ ವೇದಿಕೆಯ ಮೇಲೆ ಚುನಾವಣಾ ಪ್ರಣಾಳಿಕೆ ಮತ್ತು ಅವುಗಳ ಈಡೇರಿಕೆ ಬಗ್ಗೆ ಚರ್ಚೆಗೆ ಬರಲಿ. ಸ್ಥಳವನ್ನು ಕೂಡ ಬೊಮ್ಮಾಯಿ ಅವರೇ ನಿಗದಿ ಮಾಡಲಿ' ಎಂದು ಸವಾಲು ಹಾಕಿದ್ದಾರೆ.

ತಾಕತ್ತಿದ್ದರೆ ರೈತರ ಸಾಲಮನ್ನಾ ಮಾಡಿ: ಬಿಜೆಪಿಗೆ ಸಿದ್ದು ಸವಾಲು
'ಪೆನ್ನು, ಪೆನ್ಸಿಲ್‌, ಬುಕ್‌, ಮಂಡಕ್ಕಿ, ಮೊಸರಿನ ಮೇಲೆ 18% ತೆರಿಗೆ ಹಾಕಿ ಬಡವರು ಬದುಕದಂತೆ ಮಾಡಿದ್ದಾರೆ. ಇದೇ ಕಾರಣಕ್ಕೆ ನಾವು ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2000ದಂತೆ ವರ್ಷಕ್ಕೆ 24,000 ರೂ. ಮತ್ತು ಪ್ರತೀ ಮನೆಗೆ ತಿಂಗಳಿಗೆ 200 ಯುನಿಟ್‌ ವಿದ್ಯುತ್ ಉಚಿತವಾಗಿ ನೀಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ಪ್ರಧಾನಿ ಮೋದಿ ಅವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು, ಆಗಿದೆಯಾ? ಮನಮೋಹನ್‌ ಸಿಂಗ್‌ ಅವರ ಸರ್ಕಾರ ಇದ್ದಾಗ 50 ಕೆ.ಜಿ ಡಿಎಪಿ ಬೆಲೆ 450 ಇತ್ತು, ಇಂದು 1350 – 1400 ರೂ. ಆಗಿದೆ. ಇಂತಹ ಸರ್ಕಾರ ರೈತ ವಿರೋಧಿ ಅಲ್ವಾ? ಬೀದರ್ ಸುತ್ತಮುತ್ತ ಬೆಳೆದ ತೊಗರಿ ಬೆಳೆ ಹಾಳಾಗಿದೆ, ಒಂದು ರೂಪಾಯಿ ಪರಿಹಾರ ನೀಡಿಲ್ಲ.

ಹೆಕ್ಟೇರ್‌ ಗೆ 10,000 ಪರಿಹಾರ ನೀಡುತ್ತೇವೆ ಎಂದು ಹೇಳಿದ್ದಾರೆ, ಕೊಡ್ತಾರೋ ಇಲ್ವೋ ಗೊತ್ತಿಲ್ಲ. ಕಾರಣ ಈ ಹಿಂದೆ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಹಲವು ಜನರಿಗೆ ಪರಿಹಾರ ಇನ್ನೂ ಕನಸಾಗಿಯೇ ಇದೆ. ಬೀದರ್‌, ಯಾದಗಿರಿಗೆ ಭೇಟಿ ನೀಡಿ ರೈತರ ಕಷ್ಟ ಕೇಳಿದಿಯೇನಪ್ಪಾ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್‌ ಅವರನ್ನು ಕೇಳಿದರೆ ಹುಷಾರಿರಲಿಲ್ಲ, ಅದಕ್ಕೆ ಹೋಗಿಲ್ಲ ಎಂದಿದ್ದರು. ಕಬ್ಬು, ತೆಂಗು, ರಾಗಿ, ಜೋಳ, ಭತ್ತ ಈ ಯಾವ ಬೆಳೆನಷ್ಟಕ್ಕೂ ಪರಿಹಾರ ನೀಡಿಲ್ಲ. ನಾನು ಮುಖ್ಯಮಂತ್ರಿಯಾಗಿರುವಾಗ 22 ಲಕ್ಷದ 27 ಸಾವಿರ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ್ದ ರೂ. 50,000 ವರೆಗಿನ ಒಟ್ಟು 8,165 ಕೋಟಿ ರೂ. ಸಾಲ ಮನ್ನಾ ಮಾಡಿದ್ದೆ. ಬೊಮ್ಮಾಯಿ, ಯಡಿಯೂರಪ್ಪ, ನರೇಂದ್ರ ಮೋದಿ ಯಾರಾದರೂ ಒಬ್ಬರು ರೈತರ ಸಾಲ ಮನ್ನಾ ಮಾಡಿದ್ದಾರ? ಎಂದು ಪ್ರಶ್ನಿಸಿದರು.

ನಮ್ಮ ಪ್ರತಿಭಟನೆಯಿಂದಲೇ ಈಶ್ವರಪ್ಪ ರಾಜೀನಾಮೆ
ಈ ಬಿಜೆಪಿ ಸರ್ಕಾರ ಬರೀ ಲೂಟಿ ಮಾಡುತ್ತಿದೆ. ನಾವು ಬಾಲ್ಯದಲ್ಲಿ ಓದಿದ್ದ ಕಥೆಯ ಅಲಿಬಾಬಾ ಮತ್ತು 40 ಮಂದಿ ಕಳ್ಳರ ತಂಡಕ್ಕೆ ಈ ಸರ್ಕಾರವನ್ನು ಹೋಲಿಸಬಹುದು. 40% ಕಮಿಷನ್‌ ನೀಡಲಾಗದೆ 3 ಜನ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಇಂದು ವಿಧಾನಸೌಧದ ಗೋಡೆಗಳು ಲಂಚ, ಲಂಚ ಎಂದು ಪಿಸುಗುಟ್ಟಲು ಆರಂಭ ಮಾಡಿದೆ.  ನಾವು ವಿಧಾನಸೌಧದ ಮುಂಭಾಗ ರಾತ್ರಿ ಹಗಲು ಪ್ರತಿಭಟನೆ ಮಾಡಿದ ಮೇಲೆ ಬೇರೆ ದಾರಿಯಿಲ್ಲದೆ ಈಶ್ವರಪ್ಪ ರಾಜೀನಾಮೆ ನೀಡಿದರು. ಮತ್ತೆ ಮಂತ್ರಿ ಆಗಬೇಕು ಎಂಬ ಅವರ ಪ್ರಯತ್ನಕ್ಕೆ ಹೈಕಮಾಂಡ್‌ ಒಪ್ಪುತ್ತಿಲ್ಲ.‌

ಈ ಹತಾಶೆಯಿಂದ ನನ್ನ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರ ಕಾಮಗಾರಿಗೆ ಅನುಮೋದನೆ ನೀಡಲು, ಬಡ್ತಿ, ನೇಮಕಾತಿ, ವರ್ಗಾವಣೆ ಹೀಗೆ ಎಲ್ಲಾ ಕಡೆ ಲಂಚದಿಂದ ತುಂಬಿ ಹೋಗಿದೆ. ನಾನು 12 ವರ್ಷ ಹಣಕಾಸು ಸಚಿವನಾಗಿ ಕೆಲಸ ಮಾಡಿದ್ದೇನೆ. ಎನ್‌ಒಸಿ ಕೊಡಲು ನಾನು 1 ಪೈಸೆ ಲಂಚ ಪಡೆದಿದ್ದೆ ಎಂದು ಯಾರಾದರೂ ಹೇಳಿದ್ರೆ ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ ಎಂದು ಹೇಳಿದ್ದಾರೆ.

'ಅತ್ಯಂತ ಕೆಟ್ಟ, ಭ್ರಷ್ಟ ಬಿಜೆಪಿ ಸರ್ಕಾರ ರಾಜ್ಯದಲ್ಲಿದೆ. ಇದನ್ನು ನೀವು ಇಷ್ಟು ಕಾಲ ಸಹಿಸಿಕೊಂಡಿದ್ದೀರಿ. ಮುಂದೆ ಮೇ ತಿಂಗಳಿನಲ್ಲಿ ಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಬೇರು ಸಹಿತ ಕಿತ್ತು, ಕಾಂಗ್ರೆಸ್‌ ಪಕ್ಷವನ್ನು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಿಸುವ ಕೆಲಸ ರಾಜ್ಯದ ಜನತೆ ಮಾಡಬೇಕು ಎಂದು ಸಿದ್ದರಾಮ್ಯ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT