ರಾಜಕೀಯ

ಬ್ರಾಹ್ಮಣರು ಸಿಎಂ ಆಗಲಿ, ಬೇಡ ಎಂದವರು ಯಾರು?: ಹೆಚ್.ಡಿ.ಕುಮಾರಸ್ವಾಮಿ ಯೂಟರ್ನ್

Manjula VN

ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ವಿವಿಧ ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಇದೀಗ ತಮ್ಮ ಹೇಳಿಕೆ ಸಂಬಂಧ ಸ್ಪಷ್ಟನೆ ನೀಡಿದ್ದು, ಬ್ರಾಹ್ಮಣರು ಮುಖ್ಯಮಂತ್ರಿಯಾಗುವುದನ್ನು ನಾನು ವಿರೋಧಿಸುವುದಿಲ್ಲ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಾಠ ಪೇಶ್ವೆಗಳ ಡಿಎನ್ಎ ಇರುವ ವ್ಯಕ್ತಿಯನ್ನು ಕರ್ನಾಟಕಕ್ಕೆ ಮುಖ್ಯಮಂತ್ರಿ ಮಾಡಲು ಬಿಜೆಪಿ ಮತ್ತು ಆರ್'ಎಸ್ಎಸ್ ಹೊರಟಿವೆ ಎಂದು ಹೇಳಿದ್ದೆನೆಯೇ ಹೊರತು ರಾಜ್ಯದ ಬ್ರಾಹ್ಮಣ ಸಮುದಾಯವನ್ನು ನಾನೆಲ್ಲೂ ನಿಂದಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ಹೇಳಿಕೆಯನ್ನು ತಿರುಚುವ ಪ್ರಯತ್ನವನ್ನು ವ್ಯವಸ್ಥಿವಾಗಿ ನಡೆಸಲಾಗುತ್ತಿದೆಯೇ ಹೊರತು ನಾನು ಎತ್ತಿದ ವಿಷಯದ ಬಗ್ಗೆ ಚರ್ಚೆಗಳಾಗುತ್ತಿಲ್ಲ. ಪೇಶ್ವೆಗಳ ಡಿಎನ್ಎ ಇರುವ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿಯವರು ಹುನ್ನಾರ ಮಾಡಿದ್ದಾರೆಂದು ನಾನು ಹೇಳಿದ್ದೆ. ಇದಕ್ಕೆ ಯಾಕೆ ಗಾಬರಿ? ಬ್ರಾಹ್ಮಣ ಸಮುದಾಯವೂ ಸೇರಿ ನಾನು ಯಾವುದೇ ಸಮಾಜಕ್ಕೂ ಅಗೌರವ ತೋರಿಲ್ಲ. ತೋರುವುದೂ ಇಲ್ಲ ಎಂದು ಸ್ಪಷ್ಟವಾಗಿ ನುಡಿದರು.

ನಾನು ಸಮಾಜದ ಬಗ್ಗೆ ಅಗೌರವ ತೋರಿದ್ದೇನೆ ಎಂದು ಕೆಲವರು ನನ್ನ ಹೇಳಿಕೆಯನ್ನು ತಿರುಚಿ ಮಾತನಾಡುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ನಡೆದ ಬೆಳವಣಿಗೆ ಬಗ್ಗೆ ಹೇಳಿದ್ದೇನೆ. ಭಾನುವಾರ ನಾನು ನೀಡಿದ ಹೇಳಿಕೆ ಬ್ರಾಹ್ಮಣ ಸಮಾಜದ ಅವಹೇಳನವಲ್ಲ. ಕರ್ನಾಟಕದಲ್ಲಿ ಇರುವ ಬ್ರಾಹ್ಮಣ ಸಮಾಜದ ಬಗ್ಗೆ ನನಗೆ ಗೌರವ ಇದೆ. ನಮ್ಮ ಕುಟುಂಬ ಬ್ರಾಹ್ಣ ಸಮಾಜ ಮತ್ತು ಶೃಂಗೇರಿ ಮಠದ ಬಗ್ಗೆ ಗೌರವ ಇಟ್ಟುಕೊಂಡು ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.

SCROLL FOR NEXT