ರಾಜಕೀಯ

ಪ್ರಿಯಾಂಕ್ ಖರ್ಗೆ ಕ್ರಿಯಾಶೀಲ, ಜನಪರ ರಾಜಕಾರಣಿ: ಸಿದ್ದರಾಮಯ್ಯ

Manjula VN

ಕಲಬುರಗಿ; ಜನಪರವಾದ ಕಾಳಜಿ, ಸ್ಪಂದಿಸುವ ಗುಣಗಳು ಇಲ್ಲದವರು ಒಬ್ಬ ಉತ್ತಮ ಸಂಸದೀಯ ಪಟುವಾಗಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.

ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅತ್ಯಂತ ಕ್ರಿಯಾಶೀಲ, ವಿಚಾರಶೀಲ ರಾಜಕಾರಣಿಯಾಗಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸಂಪುಟದಲ್ಲಿ ಪ್ರಾಮಾಣಿಕ ಹಾಗೂ ನಿಷ್ಠುರತೆಯಿಂದ ಕೆಲಸ ಮಾಡುವ ನಾಯಕರಲ್ಲಿ ಇವರೂ ಒಬ್ಬರಾಗಿದ್ದರು. ಸಮರ್ಪಣಾ ಭಾವದಿಂದ ಪ್ರಾಮಾಣಿಕತೆಯಿಂದ ಕೆಲಸ ಮಾಡಿದವರು ಎಂದು ಹೇಳಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಚಿತ್ತಾಪುರ ಕ್ಷೇತ್ರದ ಅಭಿವೃದ್ಧಿಗೆ ಪ್ರಿಯಾಂಕ್ ಖರ್ಗೆಯವರು ರೂ.3,500 ಕೋಟಿ ಅನುದಾನ ಪಡೆದುಕೊಂಡಿದ್ದರು. ಇಂತಹವರು ಮುಂಬರುವ ಚುನಾವಣೆಯಲ್ಲಿ ರಾಜ್ಯ ವಿಧಾನಸಭೆಗೆ ಆಯ್ಕೆಯಾದರೆ ರಾಜ್ಯ ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಪ್ರಿಯಾಂಕ್ ಖರ್ಗೆ ಅವರಿಗೆ ಉಜ್ವಲ ರಾಜಕೀಯ ಭವಿಷ್ಯವಿದೆ ಎಂದು ತಿಳಿಸಿದರು.

ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ಅವರನ್ನು ಅಮವಾಸ್ಯೆ ಎಂದೇ ಕರೆಯುತ್ತೇನೆಂದು ಹೇಳಿದ ಅವರು, ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ನಷ್ಟ ಆಗುತ್ತದೆ. ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಹೇಳಿಕೆಯನ್ನು ತೇಜಸ್ವಿ ಸೂರ್ಯ ಅವರು ನೀಡಿದ್ದು, ಈ ಮಾತನ್ನು ಯಾರು ಕೂಡ ಖಂಡಿಸಿಲ್ಲ. ಕಾರ್ಪೊರೇಟ್‌ ವಲಯದ 14 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಆದರೆ, ರೈತರ ಸಾಲ ಮನ್ನಾ ಮಾಡಲು ಆಗುತ್ತಿಲ್ಲ ಬಿಜೆಪಿಗೆ. ಓರ್ವ ಸಂಸದನಾಗಿ ಇಂತಹ ಹೇಳಿಕೆ ನೀಡುತ್ತಾನೆ ಎಂದರೆ, ಇದು ಬಿಜೆಪಿಯ ಆಂತರಿಕ ಚಿಂತನೆ ಹೇಗಿದೆ ಎಂಬುದನ್ನು ಅರ್ಥೈಸುತ್ತದೆ ಎಂದು ಏಕವಚನದಲ್ಲೇ ಕಿಡಿಕಾರಿದರು.

SCROLL FOR NEXT