ರಾಜಕೀಯ

ನಿರಾಣಿ ಬೆಂಬಲಿಗರ ಗಿಫ್ಟ್ ಪಾಲಿಟಿಕ್ಸ್: ಆಮಿಷಕ್ಕೊಳಗಾಗದೆ ಮಹಿಳೆಯಿಂದ ಸಕ್ಕರೆ ಚೀಲ ವಾಪಸ್; ನಾರೀಮಣಿಯ ಪ್ರಬುದ್ಧ ವರ್ತನೆಗೆ ಹ್ಯಾಟ್ಸ್ ಆಫ್!

Shilpa D

ಬಾಗಲಕೋಟೆ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರಿಗೆ ವಿವಿಧ ಗೃಹೋಪಯೋಗಿ ಉಪಕರಣಗಳನ್ನು ವಿತರಿಸುವುದು ಕಳೆದ ಕೆಲವು ವಾರಗಳಲ್ಲಿ ಹಲವು ರಾಜಕಾರಣಿಗಳ ಟ್ರೆಂಡ್ ಆಗಿದೆ. ಆದರೆ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಬೆಂಬಲಿಗರು ಹಂಚಿಕೆ ಮಾಡುತ್ತಿದ್ದ ಸಕ್ಕರೆಯನ್ನ ಮಹಿಳೆಯೊಬ್ಬಳು ತಿರಸ್ಕರಿಸಿ ಸಕ್ಕರೆ ಚೀಲ ಮರಳಿ ಕೊಂಡೊಯ್ಯುವಂತೆ ಹೇಳಿರೋ ವಿಡಿಯೋ ಇದೀಗ ವೈರಲ್ ಆಗಿದೆ.

ಮೂಲಗಳ ಪ್ರಕಾರ, ಗುರುವಾರ ನಿರಾಣಿ ಬೆಂಬಲಿಗರು ಬಿಳಗಿ ತಾಲೂಕಿನ ಗಲಗಲಿಯಲ್ಲಿರುವ ಮಹಿಳೆಯ ಮನೆಗೆ ಸಕ್ಕರೆ ಚೀಲವನ್ನು ತಂದಿದ್ದಾರೆ. ಮಹಿಳೆ ಅದನ್ನು ಸ್ವೀಕರಿಸಲು ನಿರಾಕರಿಸಿದಾಗ ಬೆಂಬಲಿಗರು ಬಲವಂತವಾಗಿ ಚೀಲವನ್ನು ಒಳಗೆ ತೆಗೆದುಕೊಂಡರು. ಆದರೆ, ಮಹಿಳೆ ಚೀಲವನ್ನು ಹೊತ್ತುಕೊಂಡು ಮನೆಯ ಹೊರಗೆ ಇಟ್ಟಿದ್ದು, ಸ್ವೀಕರಿಸಲು ನಿರಾಕರಿಸಿದ್ದಾರೆ.

ಈ ದೃಶ್ಯವೆಲ್ಲಾ ವೀಡಿಯೋದಲ್ಲಿ ಸೆರೆಯಾಗಿದೆ. ಮಹಿಳೆಯರ ವರ್ತನೆ ಬೆಂಬಲಿಸಿ ವೀಡಿಯೋವನ್ನು ಸಾಮಾಜಿಕ ಕಾರ್ಯಕರ್ತ ಯಲ್ಲಪ್ಪ ಹೆಗಡೆ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದೀಗ ಮಹಿಳೆಯರ ವರ್ತನೆಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

ಈ ತಾಯಿಗಿರುವ ನಿಯತ್ತಿಗೆ ಜನತೆಯಿಂದ ಧನ್ಯವಾದಗಳು. ಆಸೆ, ಆಮಿಷಗಳಿಗೆ ಬಲಿಯಾಗದೆ ಪ್ರಬುದ್ಧತೆ ತೋರುವ ಇಂತಹ ಜನರಿಂದ ಮಾತ್ರ. ಪ್ರಜಾಪ್ರಭುತ್ವ ಉಳಿಯಲು ಸಾಧ್ಯ, ಇಂತಹ ಆಲೋಚನೆ ಎಲ್ಲ ಮತದಾರರಿಗೂ ಬರಬೇಕಿದೆ ಎಂದು ವೀಡಿಯೋ ಜೊತೆಗೆ ಪೋಸ್ಟ್ ಕೂಡ ವೈರಲ್ ಆಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಶಾಸಕ ಜೆ.ಟಿ.ಪಾಟೀಲ್, ಮಹಿಳೆಗೆ ‘ಮೊದಲ ಕಂತು’ ನೀಡಲಾಗಿತ್ತು. ಇನ್ನೂ ಎಷ್ಟು ಕಂತುಗಳು ಬರುತ್ತವೆ ಎಂಬುದನ್ನು ಕಾದು ನೋಡಬೇಕು ಎಂದು ಅವರು ಹೇಳಿದರು.

SCROLL FOR NEXT