ರಾಜಕೀಯ

ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ 6 ಸಾವಿರ ಮತದಾರರ ಹೆಸರು ಡಿಲಿಟ್‌ಗೆ ಅರ್ಜಿ: ಕಾಂಗ್ರೆಸ್ ಆರೋಪ

Manjula VN

ಕಲಬುರಗಿ: ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 6 ಸಾವಿರ ಮತದಾರರ ಹೆಸರು ಡಿಲಿಟ್‌ಗೆ ಬಿಜೆಪಿ ಅರ್ಜಿ ಸಲ್ಲಿಸಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ.

ಈ ಸಂಬಂಧ ನಿನ್ನೆಯಷ್ಟೇ ಆಳಂದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಆರ್.ಪಾಟೀಲ್ ಅವರು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರನ್ನು ಭೇಟಿ ಮಾಡಿದ್ದು, ಮನವಿ ಪತ್ರ ಸಲ್ಲಿಸಿದರು.

ಆಳಂದ ಕ್ಷೇತ್ರದ 6,670 ಮತದಾರರ ಹೆಸರನ್ನು ಅಳಿಸಿ ಹಾಕುವಂತೆ ಕೆಲ ಅಪರಿಚಿತ ವ್ಯಕ್ತಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ ಎಂದು ಪಾಟೀಲ್ ಅವರು ಮುಖ್ಯ ಚುನಾವಣಾಧಿಕಾರಿ ಮೀನಾ ಅವರ ಗಮನಕ್ಕೆ ತಂದಿದ್ದಾರೆ.

‘ನನ್ನ ಕ್ಷೇತ್ರದಲ್ಲಿ (ಆಳಂದ)ಆರು ಸಾವಿರಕ್ಕೂ ಹೆಚ್ಚು ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ರದ್ದು ಮಾಡುವಂತೆ ಮನವಿ ಬಂದಿದ್ದು, ಬಹುತೇಕ ಮತದಾರರು ತಾವುಗಳು ಅರ್ಜಿ ಹಾಕಿಲ್ಲ. ಅವರ ಬದಲಿಗೆ ಬೇರೆಯವರು ಹೆಸರು ರದ್ದು ಮಾಡುವಂತೆ ಅರ್ಜಿ ಹಾಕಿದ್ದಾರೆ. ಈ ಅರ್ಜಿ ಹಾಕಿರುವವರ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಆಂಧ್ರಪ್ರದೇಶ, ಉತ್ತರ ಪ್ರದೇಶ, ಬಿಹಾರ, ಬೇರೆ ರಾಜ್ಯ ಹಾಗೂ ಮಂಡ್ಯ ಮತ್ತು ಇತರ ಜಿಲ್ಲೆಯವರು ಮಾತನಾಡುತ್ತಾರೆ. ಈ ಬಗ್ಗೆ ತನಿಖೆ ಆಗಬೇಕು’ ಎಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಳಂದ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ಧೆಗಿಳಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಗಾಂಧಿ ಟೋಪಿ, ಕನ್ನಡಕ, ಬಿಳಿ ಕುರ್ತಾ ಮತ್ತು ಬಿಳಿ ಪೈಜಾಮದೊಂದಿಗೆ ಇರುವ ಪೋಟೋ ಜೊತೆಗೆ ಬ್ಯಾಲೆಟ್ ಪೇಪರ್‌ನಲ್ಲಿ ನನ್ನ ಭಾವಚಿತ್ರ ಹಾಕಲು ಅನುಮತಿ ನೀಡಬೇಕೆಂದೂ ಪಾಟೀಲ್ ಅವರು ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಅವರನ್ನು ಭೇಟಿಯಾದಾಗ ಈ ಸಂದರ್ಭದಲ್ಲಿ ಬಿ.ಆರ್. ಪಾಟೀಲ್ ಅವರೊಂದಿಗೆ ಕೆಪಿಸಿಸಿ ಸಂವಹನ ಮತ್ತು ಸಾಮಾಜಿಕ ಮಾಧ್ಯಮ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರು ಕೂಡ ಜೊತೆಗಿದ್ದರು.

SCROLL FOR NEXT