ರಾಜಕೀಯ

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕು, ಜೆಡಿಎಸ್ ಸರ್ಕಾರ ರಚಿಸಲು ಜನತೆ ಶಕ್ತಿ ತುಂಬಬೇಕು: ಭವಾನಿ ರೇವಣ್ಣ

Sumana Upadhyaya

ಹಾಸನ: ವಿಧಾನಸಭೆ ಚುನಾವಣೆ ದಿನ ಹತ್ತಿರ ಬರುತ್ತಿದೆ. ರಾಜಕೀಯ ಪಕ್ಷಗಳ ಚಟುವಟಿಕೆಗಳು ಪ್ರತಿದಿನ ಗರಿಗೆದರುತ್ತಿದೆ. ಜೆಡಿಎಸ್ ನಲ್ಲಿ ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆ ಗೊಂದಲ ದಿನದಿನ ಹೆಚ್ಚಾಗುತ್ತಿದೆ. ಹೆಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಹಠ ಬಿಡುತ್ತಿಲ್ಲ. ಈ ಬಾರಿ ಟಿಕೆಟ್ ಗಿಟ್ಟಿಸಿ ಶಾಸಕಿಯಾಗಿ ವಿಧಾನಸೌಧ ಮೆಟ್ಟಿಲು ಹತ್ತಿಯೇ ಸಿದ್ಧ ಎಂದು ಪಟ್ಟು ಹಿಡಿಯುತ್ತಿದ್ದಾರೆ.

ಇತ್ತ ಹೆಚ್ ಡಿ ಕುಮಾರಸ್ವಾಮಿಯವರು ತಮ್ಮ ನಿಲುವಿನಲ್ಲಿ ಸ್ಪಷ್ಟವಾಗಿದ್ದಾರೆ. ಭವಾನಿ ಅವರಿಗೆ ಟಿಕೆಟ್ ನೀಡಲು ಸುತಾರಂ ಒಪ್ಪುತ್ತಿಲ್ಲ, ಇತ್ತ ಹೆಚ್ ಡಿ ರೇವಣ್ಣ ಕುಟುಂಬ ಬಿಡುತ್ತಿಲ್ಲ. ಭವಾನಿಯವರಿಗೆ ಟಿಕೆಟ್ ಕೊಡಿಸಿಯೇ ಸಿದ್ಧ ಎಂದು ಅಪ್ಪ-ಮಕ್ಕಳು ಟೊಂಕಕಟ್ಟಿ ನಿಂತಿದ್ದಾರೆ. ಭವಾನಿ ರೇವಣ್ಣ ಒಂದು ಹೆಜ್ಜೆ ಮುಂದೆ ಹೋಗಿ ಕ್ಷೇತ್ರದಲ್ಲಿ ಪ್ರಚಾರ ಶುರುಮಾಡಿದ್ದಾರೆ.

ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ ರಚಿಸಲು ಜೆಡಿಎಸ್‌ಗೆ ಜನರ ಬೆಂಬಲವಿದೆ ಎಂದು ಹಾಸನ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್‌ ಆಕಾಂಕ್ಷಿ ಭವಾನಿ ರೇವಣ್ಣ ನಿನ್ನೆ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ. ಹಾಸನ ತಾಲೂಕಿನ ಉದ್ಭವ ರಾಮೇಶ್ವರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಅಧಿಕಾರಕ್ಕೆ ಬರಬೇಕು. 2023ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಲು ಜಿಲ್ಲೆಯ ಜನತೆ ಕೂಡ ಶಕ್ತಿ ತುಂಬಬೇಕು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕು ಎಂದರು.

ಇದಕ್ಕೂ ಮುನ್ನ ನಿಡುಡಿ ಮತ್ತು ದೊಡ್ಡಾಪುರ ಗ್ರಾಮಗಳಲ್ಲಿ ಭವಾನಿ ಅದ್ದೂರಿ ಸ್ವಾಗತ ನೀಡಿದರು. ಅಂತೂ ಈ ಬಾರಿಯ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆ ಕುತೂಹಲ ಜೀವಂತವಾಗಿ ಉಳಿದಿದೆ.

SCROLL FOR NEXT