ರಾಜಕೀಯ

ಸ್ಯಾಂಟ್ರೋ ರವಿ ಜೊತೆ ಬಿಜೆಪಿ ನಾಯಕರ ನಂಟು: ತನಿಖೆಗೆ ಹೆಚ್'ಡಿ.ಕುಮಾರಸ್ವಾಮಿ ಆಗ್ರಹ

Manjula VN

ಬೆಂಗಳೂರು: ಮೈಸೂರಿನಲ್ಲಿ ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿಯ ಮಹಿಳೆಯನ್ನು ಮದುವೆಯಾಗಿ ವಂಚಿಸಿರುವ ಪ್ರಕರಣದ ಆರೋಪಿಯಾಗಿರುವ ಕೆ.ಎಸ್‌. ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಜತೆ ರಾಜ್ಯ ಸರ್ಕಾರದ ಹಲವು ಸಚಿವರು ನಂಟು ಹೊಂದಿದ್ದಾರೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಬುಧವಾರ ಆರೋಪಿಸಿದ್ದು, ಈ ಸಂಬಂಧ ತನಿಖೆಗ ನಡೆಸುವಂತೆ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಯಾರು ಸ್ಯಾಂಟ್ರೋ ರವಿ? ಈತನ ವಿರುದ್ಧ ಮೈಸೂರು ಪೊಲೀಸರು ಇತ್ತೀಚೆಗೆ ಎಫ್‌ಐಆರ್ ದಾಖಲಿಸಿದ್ದರು. ಇವರಿಗೂ ಬಿಜೆಪಿ ಸರ್ಕಾರದ ಮಂತ್ರಿಗಳಿಗೂ ಏನು ಸಂಬಂಧ? ಸ್ಯಾಂಟ್ರೋ ರವಿ ಅನೇಕ ಮಂತ್ರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಈ ಬಗ್ಗೆ ವಿಸ್ತೃತ ತನಿಖೆಗೆ ನಾವು ಒತ್ತಾಯಿಸುತ್ತೇವೆಂದು ಹೇಳಿದರು.

1995 ರಿಂದಲೂ ರವಿ ವಿರುದ್ಧ ಮೈಸೂರು ಮತ್ತು ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಈತ ಕಾರ್ಯನಿರ್ವಹಿಸುತ್ತಿದ್ದರು. ಅವನಿಗೆ ಕೊಠಡಿ ಕೊಟ್ಟವರು ಯಾರು? ಸಚಿವರೊಂದಿಗಿನ ಅವರ ಸಂಪರ್ಕದ ಬಗ್ಗೆ ಸರ್ಕಾರ ಎಲ್ಲಾ ವಿವರಗಳನ್ನು ನೀಡಬೇಕು ಎಂದರು.

ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಹಲವು ಕಾನೂನುಬಾಹಿರ ಮಾರ್ಗಗಳನ್ನು ಅನುಸರಿಸಲಾಗಿದೆ. 2019 ರಲ್ಲಿ ತಮ್ಮ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರನ್ನು ಮುಂಬೈಗೆ ಕರೆದೊಯ್ದಿರುವವರ ಬಗ್ಗೆಯೂ ಸರ್ಕಾರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಬೀದರ್ ಮತ್ತು ಕಲಬುರಗಿಯಲ್ಲಿ ಪಕ್ಷದ ಪಂಚರತ್ನ ರಥಯಾತ್ರೆ ನಡೆಯಲಿದ್ದು, ಯಾತ್ರೆಯಿಂದ ವಾಪಸಾದ ನಂತರ ಈ ಬಗ್ಗೆ ವಿವರವಾಗಿ ಮಾತನಾಡುತ್ತೇನೆಂದು ತಿಳಿಸಿದ್ದಾರೆ. 

ಹಳೆ ಮೈಸೂರು ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿರುವ ಯಾತ್ರೆ ಗುರುವಾರದಿಂದ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಆರಂಭವಾಗಿದೆ.

ಇದೇ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಈ ಕುರಿತು ಯಾವುದೇ ಪ್ರಕರಣ ದಾಖಲಾದರೆ ಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ.

SCROLL FOR NEXT