ಬೆಂಗಳೂರು: ಬಿಜೆಪಿ (BJP) ವಿರುದ್ಧ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ (Dinesh Gundu Rao) ಸರಣಿ ಟ್ವೀಟ್ ಗಳ ಮೂಲಕ ಕಿಡಿಕಾರಿದ್ದಾರೆ. ಸ್ಯಾಂಟ್ರೋ ರವಿ ತಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದ ಎಂದು ಮಾಧ್ಯಮವೊಂದರಲ್ಲಿ ಪ್ರಕಟವಾಗಿತ್ತು.
ಇದನ್ನು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ನಾನು ಬಿಜೆಪಿ ಕಾರ್ಯಕರ್ತ ಎಂದು ಸ್ಯಾಂಟ್ರೋ ರವಿ (Santro Ravi) ಯೇ ಹೇಳಿಕೊಂಡಿದ್ದಾನೆ. ಇಂತಹ ತಲೆಹಿಡುಕರು ಬಿಜೆಪಿಯಲ್ಲಿ ಮಾತ್ರ ಇರಲು ಸಾಧ್ಯ. ಯಾಕೆಂದರೆ ಬಿಜೆಪಿಯೇ ಕಳ್ಳ ಖದೀಮರ ಸಂತೆ. ಲಂಪಟರು, ನುಂಗುಬಾಕರು, ಲಂಚ-ಮಂಚ ಪ್ರಹಸನ ಶೂರರಿಂದ ಬಿಜೆಪಿ ತುಂಬಿ ತುಳುಕುತ್ತಿದೆ. ಇಂತಹ ಭಂಡ ಬಿಜೆಪಿ ಯವರಿಗೆ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಮಾತಾಡಲು ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲ ಸ್ಯಾಂಟ್ರೋ ರವಿಯಂತಹ ಪಿಂಪ್ ಬಿಜೆಪಿ ಕಾರ್ಯಕರ್ತ. ಮತ್ತೊಂದು ಕಡೆ ನಟೋರಿಯಸ್ ರೌಡಿ ಶೀಟರ್‍ಗಳನ್ನು, ಪೋಲಿ ಪುಡಾರಿಗಳನ್ನು ಬಿಜೆಪಿಯವರೇ, ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಇಂತಹ ಬಿಜೆಪಿಯವರು ನೈತಿಕತೆಯ ಬಗ್ಗೆ ನೀತಿ ಪಾಠ ಮಾಡುವುದು ದೆವ್ವದ ಬಾಯಲ್ಲಿ ಸುಪ್ರಭಾತ ಕೇಳಿದಂತೆ. ಬಿಜೆಪಿ ಜನ ‘ಬ್ಲ್ಯೂ’ಜೆಪಿ ಎನ್ನುವುದು ಇದೇ ಕಾರಣಕ್ಕಾಗಿಯೇ ಎಂದು ಟ್ವೀಟ್ ಪ್ರಶ್ನೆ ಹಾಕಿದ್ದಾರೆ.
ಇದನ್ನೂ ಓದಿ: 'ಸ್ಯಾಂಟ್ರೋ' ಸಂಸ್ಕೃತಿ ಆರಂಭವಾಗಿದ್ದೇ ಕಾಂಗ್ರೆಸ್ ನಿಂದ, ಇಂಥಹ ಸಂಸ್ಕೃತಿಗಳಿಗೆ ಕಾಂಗ್ರೆಸ್ ಮಹಾದ್ವಾರ: ಸಿಎಂ ಬೊಮ್ಮಾಯಿ
ಸ್ಯಾಂಟ್ರೋ ರವಿ ವಿರುದ್ಧ ಎಫ್‍ಐಆರ್ ದಾಖಲಾಗಿ ಹತ್ತು ದಿನಗಳಾಗಿವೆ. ಇಷ್ಟಾದರೂ ಸ್ಯಾಂಟ್ರೋ ರವಿಯ ಬಂಧನವಾಗಿಲ್ಲ. ಸ್ಯಾಂಟ್ರೋ ರವಿ ಬಿಜೆಪಿ ಕಾರ್ಯಕರ್ತ ಎನ್ನುವ ಕಾರಣಕ್ಕೆ ಆತನ ಬಂಧನವಾಗುತ್ತಿಲ್ಲವೇ ಅಥವಾ ಕೆಲ ಬಿಜೆಪಿಯವರಿಗೆ ಅವನು ಸಲ್ಲಿಸಿದ ‘ಸೇವೆ’ಯ ಕೃತಾಜ್ಞಾರ್ಥವಾಗಿ ಬಂಧನದಿಂದ ಆತನ ರಕ್ಷಣೆ ಮಾಡಲಾಗುತ್ತಿದೆಯೇ.? ಸ್ಯಾಂಟ್ರೋ ರವಿ ಬಂಧನ ಯಾವಾಗ ಎಂದು ಸರ್ಕಾರವನ್ನ ಪ್ರಶ್ನಿಸಿದ್ದಾರೆ.