ರಾಜಕೀಯ

2013 ರಲ್ಲಿ ಟಿಕೆಟ್ ಕೊಡಿಸಿದ್ದು ನನ್ನ ರಾಜಕೀಯ ಗುರು ಎಸ್‌.ಎಂ.ಕೃಷ್ಣ:  ಸಿದ್ದರಾಮಯ್ಯ ಹುಟ್ಟಿನಿಂದಲೇ ಕಾಂಗ್ರೆಸ್‌ ಪಕ್ಷದಲ್ಲಿ ಇದ್ದರೇ?

Shilpa D

ಚಿಕ್ಕಬಳ್ಳಾಪುರ: ಕರ್ನಾಟಕ ಇತಿಹಾಸದಲ್ಲಿ ಭಷ್ಟ್ರಾತಿ ಭ್ರಷ್ಟ ಮಂತ್ರಿ ಅಂದರೆ ಅದು ಡಾ ಕೆ ಸುಧಾಕರ್. ಆತನಿಗೆ ಟಿಕೆಟ್ ಕೊಟ್ಟು ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಹೇಳಿದ್ದರು. ಸಿದ್ದರಾಮಯ್ಯ ಅವರ ಆರೋಪಕ್ಕೆ ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯನವರು ಕಾಂಗ್ರೆಸ್‌ ಪಕ್ಷದಲ್ಲಿ ಮೊದಲಿನಿಂದಲೂ ಇದ್ದರೇ? ಅವರು ಮೊದಲು ಜನತಾದಳದಲ್ಲಿದ್ದರು. ಅದೇ ಪಕ್ಷದಲ್ಲಿದ್ದು ಸಚಿವ, ಉಪಮುಖ್ಯಮಂತ್ರಿಯಾದರು. ಅಂದಮೇಲೆ ಕಾಂಗ್ರೆಸ್‌ ಗೆ ಏಕೆ ಬಂದರು? ಆಶಯಕ್ಕಾ? ಬದ್ಧತೆಗಾ? ಇವರು ಮಾತ್ರ ಬಹಳ ಪವಿತ್ರರು, ನಾವೆಲ್ಲರೂ ಅಪವಿತ್ರರಾ? ಇವರು ಮಾಡಿದ ಪಾಪದ ಕೆಲಸದಿಂದಾಗಿಯೇ ನಾನು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಅಜ್ಜವಾರದಲ್ಲಿ 494 ಕುಟುಂಬಗಳಿಗೆ ನಿವೇಶನ ಹಂಚಿಕೆ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಪ್ರಜಾ ಧ್ವನಿ ಯಾತ್ರೆಯ ಹೆಸರಿನಲ್ಲಿ ನನ್ನ ವಿರುದ್ಧ ಪ್ರಚಾರ ಸಭೆ ಮಾಡಿದ್ದಾರೆ. ಆದರೆ ನಾನು ಮಾಡಿದ ಆರೋಪಗಳಿಗೆ ಒಂದೇ ಒಂದು ಉತ್ತರ ನೀಡಲು ಕಾಂಗ್ರೆಸ್‌ ನಾಯಕರಿಗೆ ಸಾಧ್ಯವಾಗಿಲ್ಲ.

ಕಾಂಗ್ರೆಸ್‌ನಲ್ಲಿ ನನಗೆ ಟಿಕೆಟ್‌ ದೊರಕುವಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇ ಇಲ್ಲ.ನನಗೆ 2013ರಲ್ಲಿ ಟಿಕೆಟ್ ಕೊಡಿಸಿದ್ದು ನನ್ನ ರಾಜಕೀಯ ಗುರು ಎಸ್‌.ಎಂ. ಕೃಷ್ಣ ಹಾಗೂ ಡಾ. ಜಿ. ಪರಮೇಶ್ವರ್‌ ಅವರು. ನಾನು ಸಿದ್ದರಾಮಯ್ಯ ಅವರ ಬಳಿ ಟಿಕೆಟ್ ಗಾಗಿ ಏನೂ ಸಹಾಯ ಕೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಶಾಸಕನಾದ ಬಳಿಕ ನನ್ನನ್ನು ವಿಶ್ವಾಸದಿಂದ ನೋಡಿದ್ದಾರೆ. ಆಗ ನಾನೂ ಅವರನ್ನು ಸಮರ್ಥನೆ ಮಾಡಿಕೊಂಡಿದ್ದೆ. ಆದರೆ ತಪ್ಪು ಮಾಡಿದಾಗ ಅದನ್ನು ನೇರವಾಗಿ ಖಂಡಿಸಿದ್ದೇನೆ. ಚುನಾಯಿತ ಪ್ರತಿನಿಧಿಗಳು ತಮ್ಮ ಗೌರವವನ್ನು ಕಾಪಾಡಿಕೊಳ್ಳಬೇಕು. ಆದರೆ ಆ ಎಲ್ಲಾ ಗುಣಮಟ್ಟ ಬಿಟ್ಟು ಕೀಳಾಗಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.

ಇಷ್ಟು ವಯಸ್ಸಾಗಿರುವವರೇ ಹೀಗೆ ಮಾಡುವಾಗ, ಯುವಕರಾದವರು ನಾವೇನು ಮಾಡಬೇಕು? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯನವರು ಕಳೆದ ಚುನಾವಣೆಯಲ್ಲಿ ಗೆದ್ದ ಬಳಿಕ, ಅನೈತಿಕವಾಗಿ ಜೆಡಿಎಸ್‌ ಜೊತೆ ಸೇರಿ ಸರ್ಕಾರ ರಚಿಸಲು ನಮ್ಮನ್ನು ಬಲಿಪಶು ಮಾಡಿದ್ದರು ಎಂದು ಸಚಿವ ಸುಧಾಕರ್​ ಆರೋಪಿಸಿದರು.

SCROLL FOR NEXT