ರಾಜಕೀಯ

ಬಿಜೆಪಿಯ ಫೇಕ್ ಫ್ಯಾಕ್ಟರಿಯಲ್ಲಿ ತಯಾರಾದ ನಕಲಿ ಪತ್ರದ ವಿರುದ್ಧ ದೂರು; ಒಬ್ಬರಿಗೆ ಹಲ್ಲಿಲ್ಲ, ಮತ್ತೊಬ್ಬರಿಗೆ ಕಡಲೆ ಇಲ್ಲ: ಕಾಂಗ್ರೆಸ್

Shilpa D

ಬೆಂಗಳೂರು: ತಮ್ಮ ಹೆಸರಿನ ಹಳೆ ಲೆಟರ್ ಹೆಡ್‍ನ್ನು ಉಪಯೋಗಿಸಿ ಇಲ್ಲಸಲ್ಲದ ವಿಷಯವನ್ನು ಪ್ರಸ್ತಾಪ ಮಾಡಿ ನನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ದ್ವೇಷ ಹುಟ್ಟಿಸಿ ಅದರ ರಾಜಕೀಯ ಲಾಭ ಪಡೆಯಲು ಕೆಲವು ಹುನ್ನಾರ ನಡೆಸಿದ್ದಾರೆ' ಎಂದು ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಆರೋಪಿಸಿದ್ದಾರೆ.

''ಈ ಸುಳ್ಳು ಸುದ್ದಿಯನ್ನು ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಟ್ಟರುವುದು ತನಿಖೆಯಾಗಬೇಕು. ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಬಯಲಿಗೆ ತರಬೇಕು. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು'' ಎಂದು ಬಿ.ಆರ್.ಪಾಟೀಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಇನ್ನೂ ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಸೋಲಿನ ಹತಾಶೆಯಲ್ಲಿರುವ ವಿಪಕ್ಷಗಳು ಈಗ ತಮ್ಮ ಫೇಕ್ ಫ್ಯಾಕ್ಟರಿಗಳಿಗೆ ಹೆಚ್ಚಿನ ಕೆಲಸ ಕೊಟ್ಟಿವೆ. ಗ್ಯಾರಂಟಿಗಳ ಜಾರಿ ಮಾಡಿದ ನಮ್ಮ ಸರ್ಕಾರಕ್ಕೆ ಸಿಗುತ್ತಿರುವ ಜನಮೆಚ್ಚುಗೆಯನ್ನು ಸಹಿಸಲಾಗದೆ ನಕಲಿ ಸೃಷ್ಟಿಯ ಮೊರೆ ಹೋಗಿವೆ ವಿಪಕ್ಷಗಳು ಎಂದು ಬಿಜೆಪಿ ವಿರುದ್ಧ ಹರಿ ಹಾಯ್ದಿದೆ.

ಶಾಸಕ ಬಿ ಆರ್ ಪಾಟೀಲ್ ಅವರ ಹಳೆಯ ವಿಳಾಸದ ನಕಲಿ ಲೆಟರ್ ಹೆಡ್ ನಲ್ಲಿ ನಕಲಿ ಪತ್ರ ಸೃಷ್ಟಿಸಿದ ಸಾಧನೆ ಮಾಡುತ್ತೇವೆ ಎಂದುಕೊಂಡಿದ್ದರೆ ಅದು ಮೂರ್ಖತನವಾಗುತ್ತದೆ ಎಂದು ಹೇಳಿದೆ. ವಿರೋಧ ಪಕ್ಷದ ನಾಯಕನ ಆಯ್ಕೆಗಾಗಿ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ನಕಲಿ ಸುದ್ದಿಗಳು, ಪತ್ರಗಳನ್ನು ತಯಾರಿಸುವ ಹೊಸ ಟಾಸ್ಕ್ ನೀಡಿರುವಂತಿದೆ! ಹಾಗಾಗಿ ಬಿಜೆಪಿ ನಾಯಕರು ಫೇಕ್ ಫ್ಯಾಕ್ಟರಿಗೆ ಹೆಚ್ಚಿನ ಕೆಲಸ ಕೊಟ್ಟಿದ್ದಾರೆ.

ನಮ್ಮ ಶಾಸಕರಾದ ಬಿ ಆರ್ ಪಾಟೀಲರ ಹೆಸರಿನ ಲೆಟರ್ ಹೆಡ್ ಬಳಸಿದ ನಕಲಿ ಪತ್ರ ಹರಿದಾಡುತ್ತಿರುವುದರ ಕುರಿತು ಸ್ವತಃ ಶಾಸಕರೇ ಸ್ಪಷ್ಟನೆ ನೀಡಿದ್ದಾರೆ. ಶೀಘ್ರದಲ್ಲೇ ರಾಜ್ಯದ ಎಲ್ಲಾ ಫೇಕ್ ಫ್ಯಾಕ್ಟರಿಗಳ ಬಾಗಿಲು ಮುಚ್ಚಿಸುವುದು ನಿಶ್ಚಿತ, ಯಾರೇ ಆಗಿರಲಿ, ಅದೆಷ್ಟೇ ದೊಡ್ಡವರಾಗಿರಲಿ ನಕಲಿ ಸುದ್ದಿಗಳ ಸೃಷ್ಟಿಕರ್ತರನ್ನು ನಮ್ಮ ಸರ್ಕಾರ ಮಟ್ಟಹಾಕುವುದು ಖಚಿತ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

ನಮ್ಮ ಸರ್ಕಾರವನ್ನು ವಿರೋಧಿಸಲು, ಆಪಾದಿಸಲು ಬಿಜೆಪಿಗೆ ಈಗ ವಾಸ್ತವ ವಿಷಯಗಳೇ ಇಲ್ಲದಾಗಿದೆ, ಹಾಗಾಗಿ ನಕಲಿ ಸೃಷ್ಟಿಯ ಮೊರೆ ಹೋಗಿದೆ. ಬಿಜೆಪಿಯ ಫೇಕ್ ಫ್ಯಾಕ್ಟರಿಯಲ್ಲಿ ತಯಾರಾದ ನಕಲಿ ಪತ್ರದ ಕುರಿತು ನಮ್ಮ ಶಾಸಕ ಬಿ ಆರ್ ಪಾಟೀಲ್ ಅವರು ಕಲ್ಬುರ್ಗಿ SP ಅವರನ್ನು ಭೇಟಿಯಾಗಿ ನಕಲಿ ಪತ್ರದ ಕುರಿತು ಸಮಗ್ರ ತನಿಖೆಯಾಗಬೇಕೆಂದು ದೂರು ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.

ಜೆಡಿಎಸ್ ನಾಯಕರು ಬಿಜೆಪಿಯ ಲೆಟರ್ ಹೆಡ್ ಮೇಲೆ ಸಹಿ ಮಾಡಿ ತಮ್ಮದು ಅಡ್ರೆಸ್ ಇಲ್ಲದ ಪಕ್ಷ ಎಂದು ಸಾಬೀತು ಮಾಡಿದ್ದರು, ಬೊಮ್ಮಾಯಿಯವರು ಜೆಡಿಎಸ್ ಕಚೇರಿಗೆ ತೆರಳಿ, ಪತ್ರಿಕಾಗೋಷ್ಠಿಗೆ ಜೆಡಿಎಸ್ ನೆರವು ಪಡೆದು ತಮಗೆ ದಮ್ಮು ತಾಕತ್ತು ಇಲ್ಲ ಎಂದು ಸಾಬೀತು ಮಾಡಿದ್ದರು. ಒಬ್ಬರಿಗೆ ಹಲ್ಲಿಲ್ಲ, ಮತ್ತೊಬ್ಬರಿಗೆ ಕಡಲೆ ಇಲ್ಲ ಎಂಬಂತಹ ಸ್ಥಿತಿಯಲ್ಲಿರುವ ವಿಪಕ್ಷಗಳು ಕಾಂಗ್ರೆಸ್ ಸರ್ಕಾರವನ್ನು ಬೀಳಿಸುತ್ತೇವೆ ಎನ್ನುವುದು ನರಿಯೊಂದು ದ್ರಾಕ್ಷಿಗೆ ಆಸೆ ಪಟ್ಟಂತೆ! ಎಂದು ಲೇವಡಿ ಮಾಡಿದೆ.

SCROLL FOR NEXT