ರಾಜಕೀಯ

2024ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ವಿ ಸೋಮಣ್ಣ ಸ್ಪರ್ಧೆ? ಸಂಚಲನ ಮೂಡಿಸಿದ ಸಂಸದ ಜಿ ಎಸ್ ಬಸವರಾಜು ಹೇಳಿಕೆ

Sumana Upadhyaya

ತುಮಕೂರು: 2024 ರ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ವಿ. ಸೋಮಣ್ಣ ಅವರನ್ನು ಕಣಕ್ಕಿಳಿಸಲು ಭಾರತೀಯ ಜನತಾ ಪಾರ್ಟಿ ಮುಂದಾಗಿದೆಯೇ.ಹಾಲಿ ಸಂಸದ ಜಿ ಎಸ್ ಬಸವರಾಜು ಅವರು ನಿನ್ನೆ ಮಂಗಳವಾರ ಕ್ಷೇತ್ರದಲ್ಲಿ ಸಮುದಾಯದ ಮುಖಂಡರ ಸಭೆ ನಡೆಸಿದ್ದು ಅದರಲ್ಲಿ ಸೋಮಣ್ಣನವರ ವಿಚಾರ ಅವರು ಪ್ರಸ್ತಾಪಿಸಿದ್ದಾರೆ. 

ಈ ಬಗ್ಗೆ ಪಕ್ಷದ ಹೈಕಮಾಂಡ್ ಸುಳಿವು ನೀಡಿದೆ ಎಂದು ತುಮಕೂರು ಬಿಜೆಪಿ ಸಂಸದ ಜಿ ಎಸ್ ಬಸವರಾಜು ಹೇಳಿದ್ದಾರೆ. ನಾನು ನಿವೃತ್ತಿಯಾಗುತ್ತಿದ್ದಂತೆ ಸೋಮಣ್ಣ ಅವರನ್ನು ತುಮಕೂರಿನಿಂದ ಕಣಕ್ಕಿಳಿಸುವುದಾಗಿ ಹೈಕಮಾಂಡ್‌ ಹೇಳಿತ್ತು. ವೀರಶೈವ ಲಿಂಗಾಯತ ಸಮಾಜದವರು ಒಗ್ಗೂಡಿ ಅವರನ್ನು ಆಯ್ಕೆ ಮಾಡಬೇಕು. ನೀವು ವೀರಶೈವ ಸಮಾಜದವರು ಒಡೆದು ಹೋದರೆ ಸಂಸದ ಸ್ಥಾನವನ್ನು ಬೇರೆಯವರು ಆಕ್ರಮಿಸಿಕೊಳ್ಳುತ್ತಾರೆ' ಎಂದು ಅವರು ಎಚ್ಚರಿಕೆ ನೀಡಿದರು. 

ಜಿ ಎಸ್ ಬಸವರಾಜು ಅವರಿಗೆ ಈಗ 85 ವರ್ಷವಾಗಿದೆ. ಕಳೆದ ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ಸೂಚನೆಯಂತೆ ಸೋಮಣ್ಣ ಅವರು ವರುಣಾ ಮತ್ತು ಚಾಮರಾಜನಗರದ ಉಭಯ ಸ್ಥಾನಗಳಲ್ಲಿ ಸ್ಪರ್ಧಿಸಿ ಎರಡೂ ಕಡೆ ಸೋತಿದ್ದರು. 

ಬಸವರಾಜು ಅವರ ಆಡಿಯೋ ಕ್ಲಿಪ್ ವೈರಲ್ ಆಗಿದ್ದು, ಬಿಜೆಪಿ ವಲಯದಲ್ಲಿ ಅಸಮಾಧಾನ ಸೃಷ್ಟಿಸಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಕೂಡ ಲೋಕಸಭೆ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈ ಬಗ್ಗೆ ಘೋಷಣೆ ಮಾಡಲು ಬಸವರಾಜು ಅವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ನಾಯಕರೊಬ್ಬರು ಪ್ರಶ್ನಿಸಿದ್ದಾರೆ. 

ಬಸವರಾಜು ತಮ್ಮ ಭಾಷಣದಲ್ಲಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಸೋಮಣ್ಣ ಅವರ ಉಮೇದುವಾರಿಕೆಯನ್ನು ಸಮರ್ಥಿಸಿಕೊಂಡರು. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ತುಮಕೂರಿನಲ್ಲಿ ಸಮುದಾಯಕ್ಕೆ 5-6 ಎಕರೆ ಸ್ಮಶಾನ ಮಂಜೂರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದ್ದಾರೆ.

SCROLL FOR NEXT