ರಾಜಕೀಯ

ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ: ಗಾಲಿ ಜನಾರ್ದನ ರೆಡ್ಡಿ

Lingaraj Badiger

ಹಾಸನ: ಭಾರತೀಯ ಜನತಾ ಪಕ್ಷ(ಬಿಜೆಪಿ)ದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ, ರಾಜ್ಯದಲ್ಲಿ ಕೇಸರಿ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಗುರುವಾರ ಹೇಳಿದ್ದಾರೆ. 

ಇಂದು ಬೇಲೂರಿನ ಐತಿಹಾಸಿಕ ಚನ್ನಕೇಶವ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ, ನೈತಿಕತೆ, ತತ್ವ ಸಿದ್ಧಾಂತ ಇಲ್ಲದ ನಾಯಕರು ಹಿಂದುತ್ವದ ಹೆಸರಿನಲ್ಲಿ ಭಾವನಾತ್ಮಕ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಹಳೆಯ ಮತ್ತು ಈಗೀನ ಬಿಜೆಪಿ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಪಕ್ಷದಲ್ಲಿನ ಹಿರಿಯರನ್ನು ನಿರ್ಲಕ್ಷಿಸಿದ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ಪಕ್ಷದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕಾರ್ಯಕರ್ತರು ಹಾಗೂ ಮುಖಂಡರಿಗೆ ಬೆಲೆ ಇಲ್ಲದಂತಾಗಿದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

ನಾನು ಬಿಜೆಪಿ ವಿರುದ್ಧ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸ್ಥಾಪಿಸಿಲ್ಲ. 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ತತ್ವಗಳನ್ನು ಅನುಸರಿಸಿ ಪಾರದರ್ಶಕ ಮತ್ತು ಸ್ಥಿರ ಸರ್ಕಾರವನ್ನು ನೀಡಲು ಪಕ್ಷ ಸ್ಥಾಪಿಸಿದ್ದೇನೆ. ಪಕ್ಷವನ್ನು ಬಲಪಡಿಸಲು ರಾಜ್ಯ ಪ್ರವಾಸ ಆರಂಭಿಸುತ್ತೇನೆ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ನಮ್ಮ ಪಕ್ಷ ಸ್ಪರ್ಧಿಸಲಿದೆ ಎಂದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಉಚಿತ ಭಾಗ್ಯಗಳನ್ನು ಜಾರಿಗೆ ತರಬೇಕು ಮತ್ತು ಚುನಾವಣೆಯ ಮೊದಲು ಜನರಿಗೆ ನೀಡಿದ ಭರವಸೆ ಈಡೇರಿಸಲು ವಿಫಲವಾದರೆ ಬೇರೆಯವರನ್ನು ದೂಷಿಸಬಾರದು ಎಂದು ರೆಡ್ಡಿ ಹೇಳಿದ್ದಾರೆ.

SCROLL FOR NEXT