ಬೆಳಗಾವಿ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಹೇಳಿದ್ದಾರೆ.
ಇಂದು ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ, ನಾವು ಉತ್ತಮ ಆಡಳಿತ ನೀಡಿದರೂ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇವೆ. ನಮ್ಮದು ರಾಜ್ಯದ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ಶ್ರಮಿಸಿದ ಪ್ರಾಮಾಣಿಕ ಸರ್ಕಾರ ಎಂದರು.
ನಾವು ನೀರಾವರಿ ಯೋಜನೆಗಳಿಗೆ 5,000 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ ಮತ್ತು ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದ್ದೇವೆ; ಆದರೆ ನಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಚಾರ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ. ನಮ್ಮ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ ಎಂದು ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ಸರ್ಕಾರದ ಆಸೆ, ಆಮಿಷಗಳಿಂದ ಏನಾಗಲಿದೆ ಎಂಬುದು ಗೊತ್ತಾಗಲಿದೆ. ಕೆಎಸ್‌ಆರ್‌ಟಿಸಿ ಮುಚ್ಚುವ ಸ್ಥಿತಿ ನಿರ್ಮಾಣ ಆಗಿದೆ. ಡಿಸೇಲ್ ಇಲ್ಲದೇ ಬಸ್ ಗಳು ನಿಲ್ಲುವ ಸ್ಥಿತಿ ನಿರ್ಮಾಣ ಆಗಲಿದೆ. ಕರ್ನಾಟಕ ಕತ್ತಲಲ್ಲಿ ಮುಳುಗುವ ಸ್ಥಿತಿ ನಿರ್ಮಾಣ ಆಗಲಿದೆ. ಚುನಾವಣೆಗೂ ಮೊದಲು ಎಲ್ಲವೂ ಫ್ರೀ ಅಂತ ಹೇಳಿ ಗ್ಯಾರಂಟಿಗೆ ಕಂಡಿಷನ್ ಹಾಕಿದ್ದು ಯಾಕೆ? ಒಂದೇ ತಿಂಗಳಲ್ಲಿ ಸರ್ಕಾರ ಜನಪ್ರಿಯತೆ ಕಳೆದುಕೊಂಡಿದ್ದು ಇದೇ ಮೊದಲು ಎಂದರು.
ಇದನ್ನು ಓದಿ: ವಿಧಾನಸಭೆ ಚುನಾವಣೆ: ಬಿಜೆಪಿ ಸೋಲಿಗೆ ಪ್ರಹ್ಲಾದ್ ಜೋಶಿ 'ಹರಕೆಯ ಕುರಿ'; 'ಸಂತೋಷ್' ರಕ್ಷಣೆಗಾಗಿ ಜೋಶಿ ತಲೆ ದಂಡ?
ಲೋಕಸಭೆ, ವಿಧಾನಸಭೆ ಚುನಾವಣೆಗಳು ಬೇರೆ ಬೇರೆ ಆಗಿವೆ. ವಿಧಾನಸಭೆ ಚುನಾವಣೆ ಸೋಲನ್ನು ಮರೆತು ಎಲ್ಲ ನಾಯಕರು ಒಂದಾಗಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇನ್ನೊಂದು ಅವಧಿಗೆ ಪ್ರಧಾನಿ ಮಾಡೋಣ ಎಂದರು.