ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮತ್ತು ಕುಮಾರಸ್ವಾಮಿ ಅವರ ಬಗ್ಗೆ ನಮಗೆ ಗೌರವವಿದೆ. ಅವರ ವಿರುದ್ಧ ನಾನು ಮಾತನಾಡಲು ಇಷ್ಟಪಡುವುದಿಲ್ಲ. ಕುಮಾರಸ್ವಾಮಿ ಅವರು ಅವರ ಮಗನಿಗಾಗಿ ನನ್ನನ್ನು ಬಲಿಕೊಟ್ಟರು. ಜತೆಗೆ ದೇವೇಗೌಡರನ್ನು ಬಲಿಕೊಟ್ಟರು ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಒಕ್ಕಲಿಗರ ಹೆಸರು ಹೇಳಿಕೊಂಡು ಬೆಳೆದು, ಒಕ್ಕಲಿಗರಿಗೆ ಚೂರಿ ಹಾಕುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು ಎಂಬ ವಿಚಾರವನ್ನು ಜನರೇ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾನು ಸೋತಿದ್ದಕ್ಕೆ ನೋವಿಲ್ಲ. ಆದರೆ, ದೇವೇಗೌಡರು ಸೋತಿದ್ದು ಬೇಸರ ತಂದಿದೆ. ಜತೆಗೆ ಕುಮಾರಸ್ವಾಮಿ ದೊಡ್ಡವರು, ಮಾಜಿ ಮುಖ್ಯಮಂತ್ರಿ, ಅವರು ಏನು ಮಾತನಾಡಿದರು ನಡೆಯುತ್ತೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯಿಂದ ಸುಧಾ ಶಿವರಾಮೇಗೌಡ, ಚೇತನ್ ಶಿವರಾಮೇಗೌಡ ಸೇರಿದಂತೆ ನನಗೂ ಟಿಕೆಟ್ ಕೊಡಬಹುದು. ಜತೆಗೆ ಕಾಂಗ್ರೆಸ್ ಪಕ್ಷದಿಂದಲೇ ಕರೆದು ಟಿಕೆಟ್ ಕೊಡ ಬಹುದು. ರಾಜ್ಯದಲ್ಲಿ ಪಕ್ಷಗಳು ಅಭ್ಯರ್ಥಿ ಘೋಷಿಸಿದ ಮೇಲೂ ಬೇರೆ ಅಭ್ಯರ್ಥಿ ಘೋಷಣೆ ಮಾಡಿಲ್ಲವೇ. ನನಗೆ ಜೆಡಿಎಸ್ ಪಕ್ಷದ ಬಗ್ಗೆ ವಿರೋಧವಿಲ್ಲ. ಜೆಡಿಎಸ್ ಅಭ್ಯರ್ಥಿಯ ವಿರುದ್ಧ ಮಾತ್ರ ವಿರೋಧ ಎಂದರು.