ರಾಜಕೀಯ

ಯಡಿಯೂರಪ್ಪ ಸುಮ್ಮನಿದ್ದಾರೆ ಅಂದರೆ ದೌರ್ಬಲ್ಯ ಅಂದುಕೊಳ್ಳಬೇಡಿ: ಸಿಟಿ ರವಿಗೆ ವಿಜಯೇಂದ್ರ ಎಚ್ಚರಿಕೆ

Lingaraj Badiger

ಹಾವೇರಿ: ಬಿಎಸ್ ಯಡಿಯೂರಪ್ಪ ಅವರು ಮೌನವಾಗಿದ್ದಾರೆ ಅಂದರೆ, ಅದನ್ನು ದೌರ್ಬಲ್ಯ ಅಂದುಕೊಳ್ಳಬೇಡಿ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಇಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆದ ಯುವ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ವಿಜಯೇಂದ್ರ ಅವರು, ಬಿಎಸ್​ವೈ ಅವರ ಮೌನವನ್ನೇ ದೌರ್ಬಲ್ಯ ಅಂದುಕೊಂಡರೆ ಮುಂದೆ ಬಹಳ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಡಿಪಾಯ ಗಟ್ಟಿ ಇದೆ ಅಂದರೆ ಅದಕ್ಕೆ ಕಾರಣ ಯಡಿಯೂರಪ್ಪ. ಆದರೆ, ಅವರನ್ನು ಟೀಕೆ ಮಾಡುವಾಗ ಎಚ್ಚರಿಕೆ ಇರಬೇಕು. ಅವರು ತಮ್ಮ ಕುಟುಂಬ ಬೆಳೆಸಬೇಕು ಅಂತ ರಾಜಕಾರಣ ಮಾಡಿಲ್ಲ ಎಂದರು.

ಯಡಿಯೂರಪ್ಪ ಅವರು ಈಗ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿಲ್ಲ. ಅವರಿಗೆ ಯಾವುದೇ ದೊಡ್ಡ ಸ್ಥಾನಮಾನ ಇಲ್ಲದಿದ್ದರೂ ಸಹ ಅವರಿಗೆ ಆರೂವರೆ ಕೋಟಿ ಕನ್ನಡಿಗರು ತಮ್ಮ ಹೃದಯದಲ್ಲಿ ಶಾಶ್ವತ ಸ್ಥಾನ ಕೊಟ್ಟಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಆಗಬೇಕಿದೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾ ಇದ್ದೇವೆ ಎಂದು ಯಡಿಯೂರಪ್ಪ ಪುತ್ರ ತಿಳಿಸಿದ್ದಾರೆ.

SCROLL FOR NEXT