ರಾಜಕೀಯ

ಭ್ರಷ್ಟಾಚಾರವೊಂದೇ ಬೊಮ್ಮಾಯಿ ಸರ್ಕಾರದ ಸಾಧನೆ: ಸಿದ್ದರಾಮಯ್ಯ

Manjula VN

ಹಾವೇರಿ: ಭ್ರಷ್ಟಾಚಾರವೊಂದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಸಾಧನೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.

ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಪಕ್ಷದ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬೊಮ್ಮಾಯಿ ಈಗ ಅಭಿವೃದ್ಧಿಯ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. “ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇದ್ದು, ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಜನರು ನೆನಪಿಟ್ಟುಕೊಂಡು ಮತ ಹಾಕಬೇಕು ಎಂದು ಹೇಳಿದರು.

ಹಿರೇಕೆರೂರು ಕ್ಷೇತ್ರವನ್ನು ಕೃಷಿ ಸಚಿವರು ಪ್ರತಿನಿಧಿಸುತ್ತಿದ್ದಾರೆ, ಆದರೆ ಇಲ್ಲಿ ಪಶುವೈದ್ಯರಿಲ್ಲ, ಇದು ಎಷ್ಟು ನಾಚಿಕೆಗೇಡಿನ ಸಂಗತಿ. ಬಿಜೆಪಿ ಕೇವಲ ಭರವಸೆಗಳನ್ನು ನೀಡಬಲ್ಲದು. ಆದರೆ, ಅವುಗಳನ್ನು ಈಡೇರಿಸುವುದಿಲ್ಲ ಎಂಬುದಕ್ಕೆ ಇದೊಂದು ಸಾಕ್ಷ್ಯವಾಗಿದೆ ಎಂದು ತಿಳಿಸಿದರು.

ನಾನು ಸಿಎಂ ಆಗಿದ್ದಾಗ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ 150ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೆ ತಂದಿದ್ದೆ. ಅಭಿವೃದ್ಧಿಗಿಂತಲೂ ಹೆಚ್ಚಾಗಿ ಧಾರ್ಮಿಕ ಉದ್ವಿಗ್ನತೆ ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ. ಸಮಾಜದಲ್ಲಿ ಕೋಮುವಾದದ ಒಡಕು ಮೂಡಿಸಿ ಸುಲಭವಾಗಿ ಚುನಾವಣೆ ಗೆಲ್ಲಬಹುದು ಎಂದು ಭಾವಿಸಿದ್ದಾರೆ. ಇಂತಹ ಪ್ರಚಾರಗಳನ್ನು ತಡೆದುಕೊಳ್ಳುವಷ್ಟು ನಮ್ಮ ರಾಜ್ಯ ಬಲಿಷ್ಠವಾಗಿದೆ ಎಂಬುದು ಅವರಿಗೆ ತಿಳಿದಿಲ್ಲ. ಮತದಾರರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

SCROLL FOR NEXT