ರಾಜಕೀಯ

ಹೂಗುಚ್ಛವನ್ನು ವಿಜಯೇಂದ್ರಗೆ ನೀಡಿ ಎಂದು ಅಮಿತ್ ಶಾ ಯಡಿಯೂರಪ್ಪಗೆ ಹೇಳಿದ್ದೇಕೆ? ಕುತೂಹಲ ಮೂಡಿಸಿದ ಬಿಜೆಪಿ 'ಚಾಣಕ್ಯ'ನ ನಡೆ

Sumana Upadhyaya

ಬೆಂಗಳೂರು: ಕರ್ನಾಟಕದಲ್ಲಿ ಈಗ ವಿಧಾನಸಭೆ ಚುನಾವಣೆ ಪರ್ವ. ಪ್ರತಿಯೊಂದು ಪಕ್ಷಗಳ ರಾಜಕೀಯ ನಾಯಕರ ನಡೆ-ನುಡಿ ಸುದ್ದಿಯಾಗುತ್ತವೆ. ಶತಾಯಗತಾಯ ಕಮಲವನ್ನು ಮತ್ತೆ ರಾಜ್ಯದಲ್ಲಿ ಅರಳಿಸಬೇಕೆಂದು ಪಣತೊಟ್ಟಿರುವ ಬಿಜೆಪಿ ಹೈಕಮಾಂಡ್ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿವಿಧ ತಂತ್ರಗಾರಿಕೆ ಹೆಣೆಯಲು, ರಾಜ್ಯದ ಮತದಾರರ ಮನವೊಲಿಸಲು, ರಾಜ್ಯ ಬಿಜೆಪಿ ನಾಯಕರನ್ನು ಹುರಿದುಂಬಿಸಲು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹೆಸರಿನಲ್ಲಿ ಕಳೆದೆರಡು ತಿಂಗಳಿನಿಂದ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದಾರೆ.

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕಳೆದ ರಾತ್ರಿ ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸಿದ್ದರು. ರಾತ್ರಿ ವಿಶ್ರಾಂತಿ ತೆಗೆದುಕೊಂಡ ಬಳಿಕ ಇಂದು ಬೆಳಗ್ಗೆ ಅವರು ಉಪಾಹಾರ ಸೇವಿಸಲು ಹೋಗಿದ್ದು ಮಾಜಿ ಮುಖ್ಯಮಂತ್ರಿ ಲಿಂಗಾಯತ ಸಮುದಾಯದ ಪ್ರಬಲ ನಾಯಕ ಬಿ ಎಸ್ ಯಡಿಯೂರಪ್ಪನವರ ನಿವಾಸಕ್ಕೆ.

ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಬಿ ಎಸ್ ಯಡಿಯೂರಪ್ಪನವರ ಸರ್ಕಾರಿ ನಿವಾಸಕ್ಕೆ ಕಾವೇರಿಗೆ ಆಗಮಿಸಿದ ಅಮಿತ್ ಶಾ ಕಾರಿನಿಂದ ಇಳಿಯುತ್ತಲೇ ಯಡಿಯೂರಪ್ಪನವರು ಹೂಗುಚ್ಛ ನೀಡಿ ಅವರನ್ನು ಸ್ವಾಗತಿಸಲು ಮುಂದಾದರು. ಆಗ ಅಮಿತ್ ಶಾ ನನಗಲ್ಲ, ನಿಮ್ಮ ಮಗನಿಗೆ ನೀಡಿ ಎಂದು ಪಕ್ಕದಲ್ಲಿದ್ದ ವಿಜಯೇಂದ್ರ ಕಡೆಗೆ ಕೈತೋರಿಸಿದರು. ಒಂದು ಕ್ಷಣ ಯಡಿಯೂರಪ್ಪನವರಿಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ, ನಗುತ್ತಾ ಸುಮ್ಮನಾಗಿಬಿಟ್ಟರು.

ಆಗ ಅಮಿತ್ ಶಾ ಮತ್ತೊಮ್ಮೆ ವಿಜಯೇಂದ್ರಗೆ ಕೊಡಿ ಎಂದು ಒತ್ತಾಯ ಮಾಡಿದರು. ಯಡಿಯೂರಪ್ಪನವರು ಹೂಗುಚ್ಛವನ್ನು ವಿಜಯೇಂದ್ರಗೆ ನೀಡಿದರು. ಅಷ್ಟೇ ಅಲ್ಲ ಅಮಿತ್ ಶಾ ವಿಜಯೇಂದ್ರರ ಬೆನ್ನುತಟ್ಟಿ ಆಲಂಗಿಸಿ ಅಲ್ಲಿದ್ದ ಫೋಟೋಗ್ರಾಫರ್, ಮಾಧ್ಯಮದವರಿಗೆ ಫೋಸ್ ನೀಡಿದರು. ಕೊನೆಗೆ ಮತ್ತೊಂದು ಹೂಗುಚ್ಛವನ್ನು ಯಡಿಯೂರಪ್ಪನವರ ಬಳಿಯಿಂದ ತೆಗೆದುಕೊಂಡರು.

ಭಿನ್ನಾಭಿಪ್ರಾಯಕ್ಕೆ ಮದ್ದು ಅರೆಯುವ ತಂತ್ರ?: ರಾಜ್ಯ ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲ, ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಬಿಜೆಪಿಯೊಳಗೆ ಮೂರು ಬಣ ಅಧಿಕಾರಕ್ಕಾಗಿ ಬಡಿದಾಡಿಕೊಳ್ಳುತ್ತಿವೆ ಎಂಬಿತ್ಯಾದಿ ಮಾತುಗಳು ಕೇಳಿಬರುತ್ತಲೇ ಇವೆ. ಅದನ್ನು ಬರೆಹರಿಸಲು ಲಿಂಗಾಯತ ಸಮುದಾಯದ ಸಿಟ್ಟನ್ನು ಶಮನಗೊಳಿಸಲು ಈ ರೀತಿಯ ನಡೆಯವನ್ನು ತೋರಿಸಿದರೆ ಅಮಿತ್ ಶಾ ಎಂಬಂತಹ ಮಾತುಗಳು ಇಂದು ಬೆಳಗ್ಗೆಯಿಂದ ಕೇಳಿಬರುತ್ತಿವೆ.

ಬಿ ಎಸ್ ಯಡಿಯೂರಪ್ಪನವರ ನಿವಾಸದ ಮುಂದೆ ಇಂದು ಬೆಳಗಿನ ಈ ಸನ್ನಿವೇಶ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. 

ವಿಜಯೇಂದ್ರಗೆ ಸ್ಥಾನ?: ಇನ್ನು ಅಮಿತ್ ಶಾ ಅವರ ಇಂದಿನ ಈ ಸನ್ನೆಯ ಸೂಚನೆ ಯಡಿಯೂರಪ್ಪನವರ ಮಗ ವಿಜಯೇಂದ್ರಗೆ ಪಕ್ಷದಲ್ಲಿ ಈ ಬಾರಿ ಪ್ರಮುಖ ಸ್ಥಾನ ನೀಡಲಾಗುತ್ತದೆ ಎಂಬುದರ ಸೂಚನೆಯೇ, ಅವರಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ನಿಲ್ಲಲು ಟಿಕೆಟ್ ಸಿಗುವುದು ಖಚಿತವೇ ಎಂಬಿತ್ಯಾದಿ ಚರ್ಚೆಗಳು ಶುರುವಾಗಿದೆ.

SCROLL FOR NEXT