ಹುಬ್ಬಳ್ಳಿ: ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ತಮ್ಮ ಕಚೇರಿಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೋಟೋಗಳನ್ನು ಇನ್ನೂ ತೆರವು ಮಾಡದೇ ಇರುವುದು ಹಲವರ ಹುಬ್ಬೇರಿಸಿದೆ.
ಹೌದು.. ಶೆಟ್ಟರ್ ಅವರ ಕಚೇರಿಯಲ್ಲಿ ಈಗಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೋಟೋಗಳಿದ್ದು, ತಮ್ಮ ಮನೆಯ ಗೃಹ ಕಚೇರಿಯ ಗೋಡೆಯಲ್ಲಿ ನೇತು ಹಾಕಿದ್ದ ಫೋಟೋಗಳು ಈಗಲೂ ಹಾಗೆಯೇ ಇವೆ.
1994 ರಿಂದ ಬಿಜೆಪಿ ಟಿಕೆಟ್‌ನಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಅನ್ನು ಪ್ರತಿನಿಧಿಸುತ್ತಿದ್ದ ಶೆಟ್ಟರ್ ಕೇಸರಿ ಪಕ್ಷಕ್ಕೆ ಅಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಅಸ್ತಿತ್ವಲೇ ಇಲ್ಲದ ಕ್ಷೇತ್ರವನ್ನು ಶೆಟ್ಟರ್ ಬಿಜೆಪಿಯ ಭದ್ರಕೋಟೆಯಾಗಿ ಬದಲಾಯಿಸಿದ್ದರು. ಆದರೆ ಇದೀಗ ಬದಲಾದ ಸನ್ನಿವೇಶದಲ್ಲಿ ಶೆಟ್ಟರ್ ಈಗ ಕಾಂಗ್ರೆಸ್ ಪರವಾಗಿ ಸ್ಪರ್ಧಿಸುತ್ತಿದ್ದಾರೆ. ಕೇಸರಿ ಪಕ್ಷದೊಂದಿಗೆ ದಶಕಗಳ ಹಳೆಯ ಸಂಬಂಧವನ್ನು ಕಡಿದುಕೊಂಡ ನಂತರ, ಶೆಟ್ಟರ್ ಈಗ ತಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿ ತಮ್ಮ ಕಾರಿನ ಮೇಲೆ ಕಾಂಗ್ರೆಸ್ ಧ್ವಜವನ್ನು ಹಾಕಿಕೊಂಡು ಪಕ್ಷದ ಕಾರ್ಯಕರ್ತರೊಂದಿಗೆ ಪ್ರಚಾರಕ್ಕೆ ಹೊರಟಿದ್ದಾರೆ.
ಆದರೆ ಅಚ್ಚರಿ ಎಂದರೆ ಅವರ ಕಚೇರಿಯಲ್ಲಿ ಈಗಲೂ ಮೋದಿ-ಶಾ ಅವರ ಫೋಟೋಗಳು ಗೋಡೆ ಮೇಲೆ ನೇತು ಹಾಕಲಾಗಿದೆ. ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಜಗದೀಶ್ ಶೆಟ್ಟರ್ ಅವರು ಮೋದಿ ಮತ್ತು ಅಮಿತ್ ಶಾ ಫೋಟೋಗಳ ಹಿಂದಿನ ಸ್ವಾರಸ್ಯಕರ ವಿಚಾರಗಳನ್ನು ಮಾತನಾಡಿದರು.
ಇದನ್ನೂ ಓದಿ: ತಾವೇ ಕಟ್ಟಿದ ಬಿಜೆಪಿ ಕೋಟೆ ಕೆಡವುವ ಉಮೇದಿನಲ್ಲಿ ಶೆಟ್ಟರ್: ವ್ಯಕ್ತಿಯೋ, ಪಕ್ಷವೋ? ಜಿಜ್ಞಾಸೆಯಲ್ಲಿ ಕ್ಷೇತ್ರದ ಮತದಾರ!
ಭಾರತೀಯ ಜನತಾ ಪಕ್ಷದಿಂದ ಹೊರಬಂದ ನಂತರ ಮೋದಿ-ಶಾ ಫೋಟೋಗಳನ್ನು ಏಕೆ ತೆಗೆದುಹಾಕಿಲ್ಲ ಎಂದು ಪ್ರಶ್ನಿಸಿದಾಗ, 'ಇದರಲ್ಲಿ ಆಶ್ಚರ್ಯವೇನಿದೆ'... ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಬದಲಾದ ತಕ್ಷಣ ಹಿಂದಿನ ನಾಯಕರ ಫೋಟೋ ತೆಗೆಯುವುದು ಒಳ್ಳೆಯದಲ್ಲ, ನಾನು ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಶೆಟ್ಟರ್ ರೀತಿಯಲ್ಲೇ ಈ ಹಿಂದೆ ಶೆಟ್ಟರ್ ಅವರ ಪತ್ನಿ ಕೂಡ ಹಲವಾರು ಬಾರಿ ಮೋದಿ ಮತ್ತು ಶಾ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದು ಹೇಳಿದ್ದರು.
ಇದು ತಮ್ಮ ಕೊನೆಯ ವಿಧಾನಸಭಾ ಚುನಾವಣೆ ಎಂದು ಹೇಳಿರುವ ಶೆಟ್ಟರ್ ಅವರು, 'ಈ ಚುನಾವಣೆ ನನ್ನ ಸ್ವಾಭಿಮಾನದ ಹೋರಾಟವಾಗಿದೆ, ರಾಜಕೀಯ ಆಕಾಂಕ್ಷೆಗಾಗಿ ಅಲ್ಲ. ನನ್ನ ಆತ್ಮಗೌರವಕ್ಕೆ ಧಕ್ಕೆಯಾದ ಕಾರಣ ಷರತ್ತನ್ನು ಹಾಕದೆ ನನ್ನ ನೆಮ್ಮದಿಗಾಗಿ ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ಬಿಜೆಪಿ ಕೊನೆಯ ಬಾರಿಗೆ ನನ್ನನ್ನು ಇಲ್ಲಿಂದ ಕಣಕ್ಕಿಳಿಸುವ ಮೂಲಕ ಅವರಿಗೆ ಗೌರವಯುತ ನಿರ್ಗಮನ ನೀಡಬೇಕಿತ್ತು. ಆದರೆ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಲು ಮುಂದಾದ ಕಾರಣ ಇಷ್ಟೆಲ್ಲ ನಾಟಕವಾಡಿದ್ದರಿಂದ ಅದು ಆಗಲಿಲ್ಲ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಂತರ ನಾನು ಲಿಂಗಾಯತ ಸಮುದಾಯದ ನಂಬರ್ ಒನ್ ನಾಯಕ ಸ್ಥಾನ ಪಡೆಯಬಹುದೆಂಬ ಆತಂಕದ ಕಾರಣದಿಂದ ಚುನಾವಣಾ ಟಿಕೆಟ್ ನಿರಾಕರಿಸಲಾಗಿದೆ ಎಂದು ಶೆಟ್ಟರ್ ಹೇಳಿದರು.
ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತದಾರರ ಮನವೊಲಿಸಲು ಕಷ್ಟವಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್, ಆರಂಭದಲ್ಲಿ ಸ್ವಲ್ಪ ‘ಮುಜುಗರ’ ಎದುರಿಸಿದ್ದನ್ನು ಒಪ್ಪಿಕೊಂಡರು. ವಿನಾಕಾರಣ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿದೆ ಎಂದು ಹೇಳಿದಾಗ ಮತದಾರರಿಗೆ ಕ್ರಮೇಣ ಅರಿವಾಗುತ್ತಿದೆ ಎಂದರು. ಜನಪ್ರಿಯತೆ, ವಯಸ್ಸು, ಕ್ರಿಮಿನಲ್ ಹಿನ್ನೆಲೆಯಿಲ್ಲದ ಮತ್ತು ಭ್ರಷ್ಟಾಚಾರ/ಸಿಡಿ ಇಲ್ಲದಿದ್ದರೂ ನನಗೆ ಟಿಕೆಟ್ ನಿರಾಕರಿಸಿದ್ದು ಏಕೆ ಎಂಬುದು ಯಾರಿಗೂ ತಿಳಿದಿಲ್ಲ, ಆದರೆ ಬಿಜೆಪಿಯು 75 ವರ್ಷ ವಯಸ್ಸಿನವರು, ಕುಟುಂಬ ಸದಸ್ಯರು ಮತ್ತು ಅಪರಾಧ ಹಿನ್ನೆಲೆ ಹೊಂದಿರುವವರಿಗೆ ಟಿಕೆಟ್ ನೀಡಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಇದು ನನ್ನ ಕೊನೆಯ ಚುನಾವಣೆ, ನನ್ನನ್ನು ರಾಜಕೀಯವಾಗಿ ಮುಗಿಸಲು ಕೆಲವರಿಂದ ಷಡ್ಯಂತ್ರ: ಕರಪತ್ರ ಮೂಲಕ ಜಗದೀಶ್ ಶೆಟ್ಟರ್ ಘೋಷಣೆ
ಇಲ್ಲಿಯವರೆಗೆ ಸಾರ್ವಜನಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಉಲ್ಲೇಖಿಸಿದ ಶೆಟ್ಟರ್, "ಅಭಿವೃದ್ಧಿ ಪರವಾದ ಕೆಲಸಗಳಿಂದ ನಾನು ಇನ್ನೂ ಜನಪ್ರಿಯತೆ ಕಾಯ್ದುಕೊಂಡಿದ್ದೇನೆ. ಯಾವುದೇ ಅಧಿಕಾರ ವಿರೋಧಿ ಅಲೆ ಇಲ್ಲ, ನಾನು ಈ ಬಾರಿ ಭಾರಿ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ. ಕಳೆದ ಆರು ಚುನಾವಣೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮರಾಠಿಗರ ಬೆಂಬಲದಿಂದ ಗೆದ್ದಿದ್ದೇನೆ ಎಂಬ ತಪ್ಪು ಮಾಹಿತಿ ಇದೆ. 1994ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿ ಮೂರು ವರ್ಷಗಳ ಕಾಲ ಕೇಸರಿ ಪಕ್ಷವನ್ನು ಬೆಳೆಸಿದ್ದೆ. ನಂತರ ಅವರು ಪಕ್ಷದ ಘಟಕದ ಅಧ್ಯಕ್ಷನಾದೆ ಮತ್ತು ಸಿಎಂ ಆದೆ ಎಂದರು. ಅಂತೆಯೇ ಕರ್ನಾಟಕದಲ್ಲಿ ಬಿಜೆಪಿಗೆ 'ವಿಳಾಸ' ಇಲ್ಲ ಎಂದು ಪ್ರತಿಪಾದಿಸಿದ ಶೆಟ್ಟರ್, 1994 ಕ್ಕಿಂತ ಮೊದಲು ಕೇಸರಿ ಪಕ್ಷವು ಈ ಪ್ರದೇಶದಲ್ಲಿ ಯಾವುದೇ ಅಸ್ತಿತ್ವವನ್ನು ಹೊಂದಿರಲಿಲ್ಲ ಮತ್ತು ಅದರ ಅಭ್ಯರ್ಥಿಗಳು ಹಲವು ಬಾರಿ ಠೇವಣಿ ಕಳೆದುಕೊಂಡಿದ್ದಾರೆ. ನಾನು ಪಕ್ಷವನ್ನು ಕಟ್ಟಿದ್ದೇನೆ ಎಂದು ಹೇಳಿದರು.
ನನಗೆ ಅಧಿಕಾರದ ಲಾಲಸೆ ಇಲ್ಲ.. ಇದ್ದಿದ್ದರೆ ಬೊಮ್ಮಾಯಿ ಸರ್ಕಾರದಲ್ಲಿ ಸಚಿವನಾಗಿರುತ್ತಿದ್ದೆ. ರಾಜಕೀಯದಲ್ಲಿ ಬೊಮ್ಮಾಯಿ ನನಗಿಂತ ಜೂನಿಯರ್. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ನಾನು ಸಂಪುಟ ಸೇರಲಿಲ್ಲ. ಕಳೆದ ಎರಡು ವರ್ಷಗಳಿಂದ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ಜೆಡಿಎಸ್ ನ ಸಿಎಂ ಇಬ್ರಾಹಿಂ ಆರೋಪಕ್ಕೆ ತಿರುಗೇಟು ನೀಡಿದ ಶೆಟ್ಟರ್, 'ಜನತಾದಳ-ಜಾತ್ಯತೀತ ನಾಯಕ ಸಿಎಂ ಇಬ್ರಾಹಿಂ ಅವರ ಹುಬ್ಬಳ್ಳಿ ಮತ್ತು ಸುತ್ತಮುತ್ತಲಿನ ಆಸ್ತಿಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಶೆಟ್ಟರ್ ಒತ್ತಾಯಿಸಿದರು. ನಾನು ಬೆಂಗಳೂರಿನಲ್ಲಿ ಯಾವುದೇ ಬಂಗಲೆಯನ್ನು ನಿರ್ಮಿಸಿಲ್ಲ. ಇಲ್ಲಿಯೂ ನನಗೆ ಕಾನೂನು ವ್ಯಾಪ್ತಿಗೆ ಸೀಮಿತ ಆಸ್ತಿ ಇದೆ. ನಾನು 1,000 ಕೋಟಿ ರೂಪಾಯಿ ಮೌಲ್ಯದ ರಾಜಕೀಯ ನಾಯಕನಲ್ಲ. ನನ್ನ ಬಳಿ ಕೋಟಿಗಟ್ಟಲೆ ವಹಿವಾಟು ಇಲ್ಲ. ಇವೆಲ್ಲ ಅಸ್ಪಷ್ಟ ಆರೋಪಗಳು ಎಂದರು.
ಇದನ್ನೂ ಓದಿ: ನಾನು ರಾಜ್ಯಸಭೆಗೆ ಹೋಗಲ್ಲ, ಕಾಂಗ್ರೆಸ್ ಸಿದ್ಧಾಂತಕ್ಕೆ ಹೊಂದಿಕೊಳ್ಳುತ್ತೇನೆ, ಆದರೆ...: ಜಗದೀಶ್ ಶೆಟ್ಟರ್ (ಸಂದರ್ಶನ)
ನನ್ನ ಮಗ ನನ್ನ ಉತ್ತರಾಧಿಕಾರಿಯಲ್ಲ
ಇದೇ ವೇಳೆ ಉತ್ತರಾಧಿಕಾರಿ ವಾದದ ಕುರಿತು ಮಾತನಾಡಿದ ಶೆಟ್ಟರ್, ನಾನು ಯಾವಾಗಲೂ ಒಂದು ಕುಟುಂಬ, ಒಂದು ಅಧಿಕಾರ ಎಂಬುದನ್ನು ನಂಬುತ್ತೇನೆ. ನನ್ನ ಮಕ್ಕಳು ನನ್ನ ಉತ್ತರಾಧಿಕಾರಿಯಾಗಬೇಕೆಂದು ನಾನು ಒತ್ತಾಯಿಸುವುದಿಲ್ಲ. ಅವರಿಗೆ ನಾಯಕತ್ವ ಮತ್ತು ಆಸಕ್ತಿ ಇದ್ದರೆ, ಅವರು ಬೆಳೆಯಬಹುದು. ನನಗಿಂತ ಹೆಚ್ಚಾಗಿ ನನ್ನ ಪತ್ನಿ ಈ ಚುನಾವಣೆಯಲ್ಲಿ ಶ್ರಮಿಸುತ್ತಿದ್ದಾರೆ. ಅವರು ನನ್ನ ಪರವಾಗಿ ಮನೆ ಮನೆಗೆ ಪ್ರಚಾರ ಮಾಡುತ್ತಿದ್ದಾರೆ. ಮತದಾನಕ್ಕೆ ಒಂದು ವಾರ ಬಾಕಿ ಉಳಿದಿದ್ದು, ಅವರ ಕುಟುಂಬ ಈ ಚುನಾವಣೆಯನ್ನು ವೈಯಕ್ತಿಕ ಸವಾಲಾಗಿ ತೆಗೆದುಕೊಂಡಿದೆ ಎಂದು ಶೆಟ್ಟರ್ ಹೇಳಿದರು.