ವಿಜಯಪುರ: ಚುನಾವಣಾ ಪ್ರಚಾರಕ್ಕಾಗಿ ಬೆಂಗಳೂರು ನಗರಕ್ಕೆ ಆಗಮಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಹೇಳಿರುವ ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು, ಪ್ರಚಾರ ವೇಳೆ ವೇಳೆ ಮೋದಿಯವರಿಗೆ ರಾಜಧಾನಿಯ ಹದಗೆಟ್ಟ ರಸ್ತೆಗಳ ಬಗ್ಗೆ ತಿಳಿಯಲಿದ ಎಂದು ಹೇಳಿದ್ದಾರೆ.
ಶನಿವಾರ ಬಬಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ.ಪಾಟೀಲ್ ಪರ ಪ್ರಚಾರ ನಡೆಸಿದ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಆವರು, ರಾಜಧಾನಿಯ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಮೋದಿಯವರಿಗೆ ಬೆಂಗಳೂರು ಜನತೆಯ ಸಂಕಷ್ಟಗಳು ಅರಿವಿಗೆ ಬರಲಿದೆ ಎಂದು ಹೇಳಿದ್ದಾರೆ.
“ರಾಜ್ಯದ ಬಿಜೆಪಿ ಸರ್ಕಾರ ರಾಜಧಾನಿಯನ್ನು ಹದಗೆಡಿಸಿದೆ. ಹದಗೆಟ್ಟ ರಸ್ತೆಯಿಂದಾಗಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರೋಡ್ ಶೋ ವೇಳೆ ಮೋದಿ ಅವರಿಗೆ ಬೆಂಗಳೂರು ನಗರದ ಜನರ ಪರಿಸ್ಥಿತಿ ಅರ್ಥವಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಡಬಲ್ ಇಂಜಿನ ಸರ್ಕಾರ ಪದವನ್ನು ಉಲ್ಲೇಖಿಸಿ ಮಾತನಾಡಿದ ರಮ್ಯಾ ಅವರು, ಇದು ಬಿಜೆಪಿ ನಡೆಸುತ್ತಿರುವ 'ಟ್ರಬಲ್ ಎಂಜಿನ್' ಸರ್ಕಾರವಾಗಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯದ ಬಿಜೆಪಿ ಸರಕಾರ ಒಂದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೆ, ಪ್ರಚಾರಕ್ಕಾಗಿ ಮೋದಿಯವರನ್ನು ಅವಲಂಬಿಸುತ್ತಿರಲಿಲ್ಲ ಎಂದಿದ್ದಾರೆ.
ಬಳಿಕ ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸಿರುವ ಭರವಸೆ ನೀಡಿರುವ ವಿಚಾರ ಕುರಿತು ಮಾತನಾಡಿ, ಯಾವುದೇ ಸಂಘಟನೆಯನ್ನು ನಿಷೇಧಿಸುವುದನ್ನು ನಾನು ವೈಯಕ್ತಿಕವಾಗಿ ವಿರೋಧಿಸುತ್ತೇನೆ ಎಂದರು.
ಸಂಘಟನೆ ನಿಷೇಧಿಸಿರುವುದರಿಂದ ಉದ್ದೇಶಗಳ ಸಾಧಿಸಲು ಸಾಧ್ಯವಿಲ್ಲ. ಏಕೆಂದರೆ, ಒಂದು ಸಂಘಟನೆಯನ್ನು ನಿಷೇಧಿಸಿದರೆ, ಅದರದ್ದೇ ಉದ್ದೇಶ ಇಟ್ಟುಕೊಂಡು ಮತ್ತೊಂಡು ಸಂಘಟನೆ ಸಕ್ರಿಯವಾಗುತ್ತದೆ. ಆದ್ದರಿಂದ ನಿಷೇಧ ಮಾಡುವುದರಿಂದ ಸಮಸ್ಯೆ ಪರಿಹಾರಗೊಳ್ಳುವುದಿಲ್ಲ, ಬದಲಾಗಿ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಬೇಕು. ಸುಪ್ರೀಂ ಕೋರ್ಟ್ ಕೂಡ ದ್ವೇಷ ಪ್ರಚೋದಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಬೇಕು ಎಂದು ಹೇಳಿದರು.
ಮತ್ತೆ ಸಕ್ರಿಯ ರಾಜಕಾರಣಕ್ಕೆ ಬರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಈ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಮುಂದಿನ ರಾಜಕೀಯದ ಬಗ್ಗೆ ನಾನೇ ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಬಬಲೇಶ್ವರ ಕ್ಷೇತ್ರದಲ್ಲಿ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಎಂ ಬಿ ಪಾಟೀಲ್ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನೀರಾವರಿ ಯೋಜನೆಗಳು ಕಬ್ಬು ಮತ್ತು ದ್ರಾಕ್ಷಿಯಂತಹ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ಸಮೃದ್ಧಿ ಮತ್ತು ಹೆಚ್ಚಿನ ಲಾಭ ಗಳಿಸಲು ಸಹಾಯ ಮಾಡಿದೆ ಎಂದು ಹೇಳಿದರು.