ರಾಜಕೀಯ

ಕರ್ನಾಟಕ ಚುನಾವಣೆ: ಗೆಲ್ಲಬಹುದಾದ ಪಕ್ಷೇತರ ಅಭ್ಯರ್ಥಿಗಳಿಗೆ ಗಾಳ, ಕಾಂಗ್ರೆಸ್, ಬಿಜೆಪಿ ಪೈಪೋಟಿ

Nagaraja AB

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆಗೆ ವೇದಿಕೆ ಸಿದ್ಧಗೊಂಡಿದ್ದು, ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಗೆಲ್ಲಬಹುದಾದ ಅಭ್ಯರ್ಥಿಗಳತ್ತ ರಾಷ್ಟ್ರೀಯ ಪಕ್ಷಗಳು ಗಮನ ಹರಿಸುತ್ತಿವೆ.

ಮೂಲಗಳ ಪ್ರಕಾರ,ಕಾಂಗ್ರೆಸ್ ಈಗಾಗಲೇ ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್‌ಐ ಚಿಕ್ಕನಗೌಡರನ್ನು ಸಂಪರ್ಕಿಸಿದೆ.  ಈ ಕ್ಷೇತ್ರದಲ್ಲಿ ಚಿಕ್ಕನಗೌಡರ್ ಹಾಗೂ ಬಿಜೆಪಿ ಅಭ್ಯರ್ಥಿ ಎಂ.ಆರ್.ಪಾಟೀಲ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

ಚಿಕ್ಕನಗೌಡರ ಗೆಲುವಿನ ಸಾಧ್ಯತೆಯ ವರದಿಗಳ ಮೇರೆಗೆ ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸುವಂತೆ ಈಗಾಗಲೇ ಅವರಿಗೆ ಆಹ್ವಾನ ನೀಡಿದೆ. ಚಿಕ್ಕನಗೌಡರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಅನುಯಾಯಿಯಾಗಿದ್ದು, ಅವರ ಮೂಲ ಪಕ್ಷ ಬಿಜೆಪಿಯೂ ಅವರನ್ನು ಸಂಪರ್ಕಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಚಿಕ್ಕನಗೌಡರು ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಲತಾ ಮಲ್ಲಿಕಾರ್ಜುನ್ ಅವರನ್ನು ಕೂಡಾ ರಾಷ್ಟ್ರೀಯ ಪಕ್ಷಗಳು ಸಂಪರ್ಕಿಸುತ್ತಿವೆ. 

ದಿವಂಗತ ಹಿರಿಯ ಕಾಂಗ್ರೆಸ್ ನಾಯಕ ಎಂ.ಪಿ. ಪ್ರಕಾಶ್ ಅವರ ಪುತ್ರಿಯಾದ ಲತಾ ಮಲ್ಲಿಕಾರ್ಜುನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೈಯಕ್ತಿಕ ಕರೆ ಮಾಡಿ ಮಾತನಾಡಿದ್ದಾರೆ ಎಂದು ಮೂಲಗಳು ವಿವರಿಸುತ್ತವೆ. ಕಾಂಗ್ರೆಸ್ ನಾಯಕರು ಕೂಡಾ ಈಗಾಗಲೇ ಅವರ ಬಳಿ ತೆರಳಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. 

2018ರ ವಿಧಾನಸಭೆ ಚುನಾವಣೆಯಲ್ಲಿ ಒಬ್ಬ ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದರು. 2013ರ ಚುನಾವಣೆಯಲ್ಲಿ ಒಂಬತ್ತು ಸ್ವತಂತ್ರ ಅಭ್ಯರ್ಥಿಗಳು ಚುನಾಯಿತರಾಗಿ ಶೇ.7.4ರಷ್ಟು ಮತ ಗಳಿಸಿದ್ದರು. 2008 ರಲ್ಲಿ ಆರು ಸ್ವತಂತ್ರರು ಗೆದ್ದಿದ್ದರೆ 2004 ರಲ್ಲಿ 17 ಸ್ವತಂತ್ರರು ಗೆದ್ದಿದ್ದರು.

1999 ರ ಚುನಾವಣೆಯಲ್ಲಿ 19 ಸ್ವತಂತ್ರ ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಚುನಾಯಿತರಾಗಿದ್ದರು.  ಈ ಬಾರಿ ಬಂಡಾಯ ಮತ್ತು ಟಿಕೆಟ್ ನಿರಾಕರಣೆಯಿಂದಾಗಿ ಅನೇಕ ಸಂಭಾವ್ಯ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದು ಗೆಲ್ಲುವ ಉತ್ತಮ ಅವಕಾಶವನ್ನು ಹೊಂದಿದ್ದಾರೆ. 
 

SCROLL FOR NEXT